

ಸಂಸತ್ತಿನ ಮುಂಗಾರು ಅಧಿವೇಶನ ರಾಜಕೀಯ ಪ್ರತಿಷ್ಠೆಯ ತಾಕಲಾಟಕ್ಕೆ ಸಿಲುಕಿ ವ್ಯರ್ಥವಾಗಿದೆ. ನಿಜಕ್ಕೂ ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ರಾಜಕೀಯ ವ್ಯವಸ್ಥೆ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ಅಸಮಾಧಾನ, ಅಸಂತೋಷ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆದಾಗ ಅದು ಪ್ರಜಾತಂತ್ರದ ಸ್ವಾಸ್ಥ್ಯಕ್ಕೆ ಮಾರಕವಾಗುವುದಲ್ಲದೆ, ಜನರ ನಂಬಿಕೆಗೂ ಪೆಟ್ಟು. ನಮ್ಮ ರಾಜಕೀಯ ಪಕ್ಷಗಳಿಗೆ ಚರ್ಚೆ, ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಬೇಕಿಲ್ಲವೇನೋ ಎಂಬಂಥ ಸ್ಥಿತಿ ಸೃಷ್ಟಿಯಾಗಿದೆ. ವಾಗ್ವಾದ, ಗದ್ದಲ, ಕಲಹದಿಂದ ಸಂಸದರು ಯಾವ ಸಂದೇಶ ನೀಡಲು ಹೊರಟಿದ್ದಾರೆ? ಹಿಂದೆಲ್ಲ ಅತ್ಯಂತ ಕ್ಲಿಷ್ಟ, ಅಷ್ಟೇ ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆದ ನಿದರ್ಶನಗಳನ್ನು ರಾಜಕೀಯ ಪಕ್ಷಗಳು ಮರೆತು ಬಿಟ್ಟವೇ?
ಈ ಬಾರಿ ಜುಲೈ 19ರಿಂದ ಮುಂಗಾರು ಅಧಿವೇಶನ ಆರಂಭವಾದರೂ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಸಾರ್ಥಕ ಚರ್ಚೆ ನಡೆಯದೆ ಈಗ ಮುಂಗಾರು ಅಧಿವೇಶನದ ಕಲಾಪವೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಲೋಕಸಭೆ ಕೇವಲ 21 ಗಂಟೆಗಳ ಕಾಲ ಕಾರ್ಯನಿರ್ವಹಿಸಿದೆ. ಮಂಗಳವಾರದಂದು ರಾಜ್ಯಸಭೆ ಕಲಾಪ ವೇಳೆ ನಡೆದ ಘಟನೆಯಂತೂ ಸಂಸದೀಯ ವ್ಯವಸ್ಥೆಗೆ ಎಸಗಿದ ಅವಮಾನ. ನೂತನ ಕೃಷಿ ಕಾಯ್ದೆ ಕುರಿತಂತೆ ಚರ್ಚೆ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಕೆಲ ಸದಸ್ಯರು ತೀವ್ರ ಗದ್ದಲ ಮಾಡಿ, ಸಭಾಪತಿ ಪೀಠದ ಮುಂಭಾಗದಲ್ಲಿರುವ ಮೇಜನ್ನು ಹತ್ತಿ, ಕಪು್ಪಬಟ್ಟೆ ಪ್ರದರ್ಶಿಸಿದ್ದರು. ಅಲ್ಲದೆ ದಾಖಲೆಗಳನ್ನು ಎಸೆಯುವ ಮೂಲಕ ಉದ್ಧಟತನ ತೋರಿದರು. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು, ಭಾವುಕರಾಗಿ ಮಾತನಾಡಿದ್ದಾರೆ. ‘ಪ್ರಜಾಪ್ರಭುತ್ವದ ದೇಗುಲದಲ್ಲಿ (ಸಂಸತ್ತು) ನಡೆದ ಈ ಗದ್ದಲದಿಂದಾಗಿ ನಿದ್ದೆಯಿಲ್ಲದ ರಾತ್ರಿ ಕಳೆದೆ. ಈ ಘಟನೆಯಿಂದ ಬಹಳ ಬೇಸರವಾಗಿದೆ. ದೇವಸ್ಥಾನದಲ್ಲಿ ಗರ್ಭಗುಡಿ ತನಕ ಮಾತ್ರ ಭಕ್ತರು ಪ್ರವೇಶಿಸಬಹುದು. ಅದರಂತೆ ಸದನಕ್ಕೂ ಒಂದು ಪಾವಿತ್ರ್ಯತೆ, ಘನತೆ ಇದೆ. ಈ ಗದ್ದಲದಿಂದ ಸದನದ ಪಾವಿತ್ರ್ಯತೆ ನಾಶವಾಗಿದೆ’ ಎಂದಿದ್ದಾರೆ. ಅವರ ಈ ಮಾತುಗಳು ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ಆತ್ಮಾವಲೋಕನದ ಕನ್ನಡಿಯಾಗಬೇಕು. ಅಧಿವೇಶನ ಸುಗಮವಾಗಿ ನಡೆಯದ್ದರ ಬಗ್ಗೆ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಕೂಡ ಬೇಸರ ಹೊರಹಾಕಿದ್ದಾರೆ.
ಮಸೂದೆ ಅಥವಾ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಸಹಜ. ಭಿನ್ನಾಭಿಪ್ರಾಯಗಳು ಚರ್ಚೆಗೆ, ವಿಚಾರ ಮಂಥನಕ್ಕೆ ನಾಂದಿಯಾಗಿ, ಹೊಸ ಹೊಳಹು ಕಂಡುಕೊಂಡು ಸಮಸ್ಯೆಗಳಿಗೆ ರ್ತಾಕ ಅಂತ್ಯ ಕಂಡುಕೊಳ್ಳಬೇಕೆ ಹೊರತು ಕೂಗಾಟ, ಚೀರಾಟ, ಗದ್ದಲ- ಇವೆಲ್ಲ ವಿರೋಧವನ್ನು ವ್ಯಕ್ತ ಮಾಡುವ ವಿಧಾನಗಳಲ್ಲ. ಅಷ್ಟಕ್ಕೂ, ಚರ್ಚೆ ಮೂಲಕ ಬಗೆಹರಿಯದ ಸಮಸ್ಯೆಗಳೇ ಇಲ್ಲ. ಅಂಥ ಸಂವಾದದ ದಾರಿಯನ್ನು ರಾಜಕೀಯ ಪಕ್ಷಗಳು ಪ್ರಶಸ್ತಗೊಳಿಸಬೇಕೆ ಹೊರತು ಮುಚ್ಚಿಹಾಕಬಾರದು. ರಾಜಕೀಯ ಪ್ರತಿಷ್ಠೆಯ ಜಿದ್ದಾಜಿದ್ದಿಗೆ ಕಲಾಪವಾಗಲಿ, ಸದನದ ಘನತೆಯಾಗಲಿ ಹಾಳಾಗಬಾರದು. ಜನಪ್ರತಿನಿಧಿಗಳ ವರ್ತನೆಯನ್ನು ಇಡೀ ದೇಶ ಗಮನಿಸುತ್ತದೆ ಎಂಬುದನ್ನು ಮರೆಯಬಾರದು.