

ನವದೆಹಲಿ: ಪ್ರಸಿದ್ಧ ಮಾಜಿ ಅಥ್ಲೀಟ್, ಓಟದ ರಾಣಿ ಪಿ.ಟಿ ಉಷಾ ಅವರು ಇಂದು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಖ್ಯಾತ ಕ್ರೀಡಾಪಟು ಪಿ.ಟಿ.ಉಷಾ, ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಹಾಗೂ ಖ್ಯಾತ ಚಿತ್ರಸಾಹಿತಿ, ಬಾಹುಬಲಿ ಸಿನಿಮಾದ ಕಥೆಗಾರ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನು ಸರ್ಕಾರವು ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿತ್ತು. ಇದೀಗ ಉಷಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಉಷಾ ಭಾರತದ ಶ್ರೇಷ್ಠ ಕ್ರೀಡಾ ಪಟುಗಳಲ್ಲಿ ಒಬ್ಬರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚಿನ ಪದಕಗಳಿಗೆ ಇವರು ಭಾಜನರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅನೇಕ ರಾಷ್ಟ್ರೀಯ ಮತ್ತು ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದ್ದಾರೆ ಮತ್ತು ಮುರಿದಿರುವ ಉಷಾ, ರೈಲ್ವೆಯಲ್ಲಿ ಅಧಿಕಾರಿಯಾಗಿದ್ದಾರೆ. ಉಷಾ ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿ ಗಳಿಸಿದ್ದಾರೆ.
ಪಿ.ಟಿ ಉಷಾ ಅವರು 1986ರಲ್ಲಿ ಸಿಯೋಲ್ನಲ್ಲಿ ನಡೆದ 10ನೆಯ ಏಷಿಯನ್ ಗೇಮ್ಸ್ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ 4 ಚಿನ್ನ ಮತ್ತು 1 ರಜತ ಪದಕಗಳನ್ನು ಪಡೆದರು. ಜಕಾರ್ತಾದಲ್ಲಿ 1985ರಲ್ಲಿ ನಡೆದ 6ನೆಯ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ಷಿಪ್ನಲ್ಲಿ 5 ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ ಆರು ಪದಕ ಗೆದ್ದ ಏಕೈಕ ಕ್ರೀಡಾಳು ಎನಿಸಿದ್ದಾರೆ.
ರಾಜ್ಯಸಭಾ ಸದಸ್ಯೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಷಾ ಅವರಿಗೆ ಶುಭ ಹಾರೈಸಿದ್ದಾರೆ.