ಜಾತಿ ನಮೂದಿಸಿರುವ ವಾಹನಗಳು ಇನ್ಮುಂದೆ ಸೀಜ್‌: ಇಲ್ಲಿ ಬಂತು ಹೊಸ ರೂಲ್ಸ್‌

vehicles
Published on

ಲಖನೌ: ಅನೇಕ ಮಂದಿ ತಮ್ಮ ವಾಹನಗಳ ಮೇಲೆ ತಮ್ಮ ಹೆಸರು ಇಲ್ಲವೇ, ಮಕ್ಕಳ ಹೆಸರುಗಳನ್ನು ಬರೆದುಕೊಳ್ಳುವುದು ಸಾಮಾನ್ಯ. ಇಲ್ಲದೇ ಹೋದರೆ ತಮಗೆ ಅಂಥ ವಾಹನ ಖರೀದಿಸಲು ಅನುಕೂಲ ಕಲ್ಪಿಸಿರುವವರ ಬಗ್ಗೆ ‘ಅಮ್ಮನ ಆಶೀರ್ವಾದ‘ , ‘ಗೆಳೆಯನ ಪ್ರೀತಿಯ ಕಾಣಿಕೆ...’ ಹೀಗೆ ಬರೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ಜಾತಿಯನ್ನು ವಾಹನಗಳ ಮೇಲೆ ಬರೆದುಕೊಳ್ಳುತ್ತಾರೆ.

ಬೇರೆ ಏನು ಬೇಕಾದರೂ ಬರೆದುಕೊಳ್ಳಿ, ಆದರೆ ಜಾತಿಯನ್ನು ವಾಹನಗಳ ಮೇಲೆ ಬರೆದು ಇನ್ನುಮುಂದೆ ಪ್ರದರ್ಶಿಸುವಂತಿಲ್ಲ. ಒಂದು ವೇಳೆ ಇದಾಗಲೇ ಜಾತಿಯನ್ನು ಬರೆದಿದ್ದರೆ ಅದನ್ನು ಅಳಿಸಿ ಹಾಕಬೇಕು, ಇಲ್ಲದೇ ಹೋದರೆ ನಿಮ್ಮ ಗಾಡಿ ಆಗಲಿದೆ ಸೀಜ್‌...!

ಇಂಥದ್ದೊಂದು ಆದೇಶ ಉತ್ತರ ಪ್ರದೇಶದಿಂದ ಹೊರಬಂದಿದೆ. ಸದ್ಯ ಲವ್‌ ಜಿಹಾದ್‌ ಹೆಸರಿನಲ್ಲಿ ಮತಾಂತರ ಮಾಡುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಭಾರಿ ಸುದ್ದಿಯಲ್ಲಿ ಇರುವ ಉತ್ತರ ಪ್ರದೇಶ ಸರ್ಕಾರ ಇದೀಗ ಜಾತಿಯನ್ನು ವಾಹನಗಳ ಮೇಲೆ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಆದ್ದರಿಂದ ಇಂಥ ವಾಹನಗಳನ್ನು ಸೀಜ್‌ ಮಾಡಲಿದ್ದಾರೆ ಸಾರಿಗೆ ಇಲಾಖೆ. ಪ್ರಧಾನಿ ಕಚೇರಿಯಿಂದ ಈ ಸೂಚನೆ ಬಂದ ನಂತರ ಸಾರಿಗೆ ಇಲಾಖೆ ಈ ಪ್ರಕ್ರಿಯೆಗೆ ಮುಂದಾಗಿದ್ದು, ಈ ಕುರಿತು ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಆದೇಶ ನೀಡಿದೆ. ಜಾತಿ ಸ್ಟಿಕ್ಕರ್‌ ಅಂಟಿಸಿಕೊಂಡಿರುವ ವಾಹನಗಳನ್ನು ವಶಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದೆ.

ಅಷ್ಟಕ್ಕೂ ಈ ಆದೇಶವೇಕೆ?

ಯಾದವ್, ಜಾಟ್, ಗುಜ್ಜಾರ್ , ಬ್ರಾಹ್ಮಣ, ಪಂಡಿತ್, ಖತ್ರಿ, ಲೋ ಮತ್ತು ಮೌರ್ಯ ಹೀಗೆ ತಮ್ಮ ತಮ್ಮ ಜಾತಿಗಳ ಹೆಸರುಗಳನ್ನು ತಮ್ಮ ವಾಹನಗಳ ಮೇಲೆ ಹಾಕಿಕೊಳ್ಳುವುದು ಹಲವೆಡೆ ಮಾಮೂಲಾಗಿದೆ. ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಇದು ಸಾಮಾನ್ಯ. ಪ್ರತಿ 20 ವಾಹನಗಳಲ್ಲಿ ಒಂದು ವಾಹನದ ಮೇಲಾದರೂ ಈ ರೀತಿಯ ಜಾತಿ ನಮೂದು ಆಗಿರುತ್ತದೆ.

ವಿಂಡ್‍ಸ್ಕ್ರೀನ್‍ಗಳು ಅಥವಾ ವಾಹನಗಳ ನಂಬರ್ ಪ್ಲೇಟ್‍ಗಳಲ್ಲಿ ಜಾತಿ ಗುರುತುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ಶಿಕ್ಷಕ ಹರ್ಷಲ್ ಪ್ರಭು ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಅಂತಹ ಸ್ಟಿಕ್ಕರ್‌ಗಳನ್ನು ಪ್ರದರ್ಶಿಸುವುದು ಸಾಮಾಜಿಕ ವ್ಯವಸ್ಥೆಗೆ ಅಪಾಯ. ಈ ಬಗ್ಗೆ ಗಮನಹರಿಸಬೇಕೆಂದು ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿಯವರಿ ಆದೇಶ ಬಂದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net