ಕರೊನಾದಿಂದ ಊರು ಸೇರಿದ ಕಾರ್ಮಿಕರು: ಅವರ ಸೈಕಲ್‌ನಿಂದ ಸರ್ಕಾರದ ಬೊಕ್ಕಸಕ್ಕೆ 21 ಲಕ್ಷ ರೂ ಆದಾಯ!

cycle
Published on

ಲಖನೌ: ಕಳೆದೆರಡು ವರ್ಷಗಳಿಂದ ಕರೊನಾ ಕೊಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಅದರಲ್ಲಿಯೂ 2020ರಲ್ಲಿ ಮೊದಲ ಅಲೆ ಶುರುವಾದಾಗ ಇಡೀ ವಿಶ್ವವೇ ಕಂಗೆಟ್ಟು ಹೋಗಿತ್ತು. ಆ ಸಮಯದಲ್ಲಿ ಕೂಲಿ ಕಾರ್ಮಿಕರ ಪಾಡಂತೂ ಕೇಳುವುದೇ ಬೇಡ. ಯಾವುದೇ ಉಸಾಬರಿ ಬೇಡ ಎಂದು ತಮ್ಮ ಸಾಮಗ್ರಿಗಳನ್ನು ಕಟ್ಟಿಕೊಂಡು ಊರಿಗೆ ವಾಪಸಾದರು.

ಈ ಸಂದರ್ಭದಲ್ಲಿ ಹಲವಾರು ಕಾರ್ಮಿಕರು ತಮ್ಮ ಬಳಿ ಇರುವ ಸೈಕಲ್‌ ಕೊಂಡೊಯ್ಯಲು ಆಗದೇ ಅದನ್ನು ತಾವು ಇದ್ದ ಸ್ಥಳದಲ್ಲಿಯೇ ಹೇಗೇಗೋ ಎಸೆದು ಹೋಗಿಬಿಟ್ಟರು. ಆದ್ದರಿಂದ ಸೈಕಲ್ ಪಾಡಂತೂ ಕೇಳೋರೇ ಇಲ್ಲದಂತಾಗಿತ್ತು.

ಆದರೆ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಸೈಕಲ್‌ ಅನ್ನು ಒಂದುಗೂಡಿಸಿರುವ ಉತ್ತರ ಪ್ರದೇಶ ಸರ್ಕಾರ, ಅದನ್ನು ಹರಾಜು ಮಾಡಿದ್ದು, 27 ಲಕ್ಷ ರೂಪಾಯಿ ಗಳಿಸಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಬಿಟ್ಟು ಹೋಗಿದ್ದ 5,400 ಬೈಸಿಕಲ್‌ಗಳನ್ನು ಸಹರಾನ್‌ಪುರ ಜಿಲ್ಲಾಡಳಿತವು 2 ವರ್ಷಗಳ ನಂತರ ಹರಾಜು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5,400 ಬೈಸಿಕಲ್‌ಗಳನ್ನು ಹರಾಜು ಮಾಡಲಾಗಿದ್ದು ಇದರಿಂದ 21.2 ಲಕ್ಷ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಹರಿದು ಬಂದಿದೆ ಎಂದು ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಕಿನ್‌ಶುಕ್ ಶ್ರೀವಾಸ್ತವ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net