ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ: ಉಪರಾಷ್ಟ್ರಪತಿ ಹುದ್ದೆಗೆ ಮುನ್ಸೂಚನೆ? ಹುದ್ದೆ ತೊರೆದ ಸಿಂಗ್

nakhvi
Published on

ನವದೆಹಲಿ: ಕೇಂದ್ರ ಸಚಿವ ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ರಾಜೀನಾಮೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ಜತೆಗೆ ಕೇಂದ್ರ ಸಚಿವರಾದ ಜೆಡಿ (ಯು)ನ ಆರ್‌ಸಿಪಿ ಸಿಂಗ್ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಅಟಲ್​ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿರಾಗಿದ್ದವರ ಪೈಕಿ ಈ ಇಬ್ಬರೇ ಸಚಿವರು ಪ್ರಧಾನಿ ಮೋದಿ ಸರ್ಕಾರದಲ್ಲಿಯೂ ಸಚಿವರಾಗಿರುವುದು ವಿಶೇಷ. ನಖ್ವಿ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯ ಹೊಣೆ ಹೊತ್ತಿದ್ದರೆ, ಸಿಂಗ್ ಸಂಪುಟದಲ್ಲಿ ಉಕ್ಕು ಸಚಿವರಾಗಿದ್ದರು.

ಸಚಿವ ಸಂಪುಟ ಸಭೆಯಲ್ಲಿ ನಖ್ವಿ ಅವರನ್ನು ಪ್ರಧಾನಿ ಮೋದಿ ಹೊಗಳಿದ್ದರು. ಆಗಲೇ ಇದು ರಾಜೀನಾಮೆ ನೀಡುವ ಸೂಚನೆ ಎಂದೇ ಪರಿಗಣಿಸಲಾಗಿತ್ತು. ನಾಳೆ (ಜುಲೈ 7) ರಾಜ್ಯಸಭಾ ಅವಧಿ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಳೆ ರಾಜೀನಾಮೆ ನೀಡಬೇಕಿತ್ತು. ಅದರ ಬದಲು ಒಂದು ದಿನ ಮುಂಚೆ ನೀಡಿದ್ದಾರೆ.

ಈ ಮಧ್ಯೆ, ನಖ್ವಿ ಅವರನ್ನು ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅವಧಿಯು ಬರುವ ಆಗಸ್ಟ್​ 10ಕ್ಕೆ ಕೊನೆಗೊಳ್ಳಲಿದೆ. ಈ ಹುದ್ದೆಗೆ ನಾಮಪತ್ರ ಸಲ್ಲಿಸಲು ಈ ಜುಲೈ 19ರವರೆಗೆ ಅವಕಾಶವಿದೆ. ಆಗಸ್ಟ್​ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಪ್ರವಾದಿ ಮೊಹಮ್ಮದ್​ ಕುರಿತಾಗಿ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಅವರ ಹೇಳಿಕೆಯಿಂದ ಸದ್ಯ ಭುಗಿಲೆದ್ದಿರುವ ಗಲಾಟೆಯನ್ನು ಶಮನಗೊಳಿಸುವ ಸಲುವಾಗಿ ಬಿಜೆಪಿಯು ಓರ್ವ ಮುಸ್ಲಿಂ ನಾಯಕರನ್ನು ಉಪರಾಷ್ಟ್ರಪತಿ ಹುದ್ದೆಗೆ ಪರಿಗಣಿಸುತ್ತಿದೆ ಎಂದೂ ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಕೇರಳದ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​, ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಫ್ತುಲ್ಲಾ ಮತ್ತು ಪಂಜಾಬ್​ ಮಾಜಿ ಸಿಎಂ ಅಮರೀಂದರ್​ ಸಿಂಗ್​ ಹೆಸರು ಕೂಡ ಉಪರಾಷ್ಟ್ರಪತಿ ಹುದ್ದೆಗೆ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net