

ನವದೆಹಲಿ: ಕರೊನಾ ವೈರಸ್ ಕ್ಷಣಕ್ಷಣಕ್ಕೂ ಆತಂಕ, ತಲ್ಲಣವನ್ನು ಸೃಷ್ಟಿಸುತ್ತಲೇ ಸಾಗಿದೆ. ಇದಾಗಲೇ ಹಲವಾರು ರಾಜಕೀಯ ಮುಖಂಡರನ್ನೂ ಆವರಿಸಿ, ಕೆಲವರ ಪ್ರಾಣ ತೆಗೆದಿದೆ ಈ ವೈರಸ್.
ಇದೀಗ ಬಿಜೆಪಿ ನಾಯಕಿ ಉಮಾ ಭಾರತಿ ಅವರ ಸರದಿ. ನಿನ್ನೆ ತಡರಾತ್ರಿ ಟ್ವಿಟರ್ ಮೂಲಕ ಮಾಹಿತಿ ನೀಡಿರುವ ಉಮಾ ಭಾರತಿ, ತಮಗೆ ಕರೊನಾ ಪಾಸಿಟಿವ್ ಬಂದಿರುವುದಾಗಿ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಅವರು ಅಲ್ಪ ಜ್ವರದಿಂದ ಬಳಲುತ್ತಿದ್ದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕರೊನಾ ಪಾಸಿಟಿವ್ ಎಂಬ ವರದಿ ಬಂದಿದೆ ಎಂದಿರುವ ಉಮಾ ಭಾರತಿ, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರವಾಸದಲ್ಲಿ ಇದ್ದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿದ್ದೆ. ಆದರೂ ಕರೊನಾ ಪಾಸಿಟಿವ್ ಎಂಬ ವರದಿ ಬಂದಿದೆ ಎಂದಿದ್ದಾರೆ. ಹರಿದ್ವಾರ ಮತ್ತು ಋಷಿಕೇಶ್ ನಡುವೆ ಇರುವ ವಂದೇ ಮಾತರಂ ಕುಂಜ್ನಲ್ಲಿ ಸದ್ಯ ಐಸಲೇಷನ್ನಲ್ಲಿ ಇರುವುದಾಗಿ ಹೇಳಿದ್ದಾರೆ.
ನಾಲ್ಕು ದಿನಗಳ ನಂತರ ಮತ್ತೊಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಒಂದು ವೇಳೆ ಪರಿಸ್ಥಿತಿ ಹಾಗೇ ಇದ್ದರೆ ವೈದ್ಯರನ್ನು ಸಂಪರ್ಕಿಸುತ್ತೇನೆ ಎಂದು ಉಮಾ ಭಾರತಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.