ಶಾರುಖ್​ ನನ್ನನ್ನು ಎತ್ತಿಕೊಳ್ತಾರೆ ಎಂದು ಬರೀ ಕಡಲೆಕಾಯಿ ತಿಂದಿದ್ದೆ- ಗುಟ್ಟು ಬಿಚ್ಚಿಟ್ಟ ಟ್ವಿಂಕಲ್​ ಖನ್ನಾ

twinkle
Published on

ಮುಂಬೈ: ತಮ್ಮ ಪಾತ್ರಕ್ಕೆ ತಕ್ಕಂತೆ, ತೂಕವನ್ನು ಕಡಿಮೆ ಮಾಡಿಕೊಳ್ಳುವುದು, ಹೆಚ್ಚಿಸಿಕೊಳ್ಳುವುದು ಇತ್ಯಾದಿಗಳನ್ನು ನಟ-ನಟಿಯರು ಮಾಡುತ್ತಲೇ ಇರುತ್ತಾರೆ. ತಾವು ಅಭಿನಯಿಸುವ ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಹಳ ಸರ್ಕಸ್​ ಮಾಡುವುದು ಗೊತ್ತೇ ಇದೆ. ಈಗ ಅಂಥದ್ದೇ ಒಂದು ಗುಟ್ಟನ್ನು ಬಾಲಿವುಡ್​ ನಟ ಅಕ್ಷಯ್ ಕುಮಾರ್ ಪತ್ನಿ ನಟಿ ಟ್ವಿಂಕಲ್​ ಖನ್ನಾ ಬಿಚ್ಚಿಟ್ಟಿದ್ದಾರೆ.

ಟ್ವೀಕ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ನಡೆಸಿಕೊಟ್ಟ ಸಂದರ್ಶನದಲ್ಲಿ ಟ್ವಿಂಕಲ್​ ಈ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ನಟ ಶಾರುಖ್​ ಖಾನ್​ ನಟಿಸಿರುವ 'ಬಾದ್‌ಶಾ' ಚಿತ್ರದಲ್ಲಿ ಸಣ್ಣಗಾಗುವ ಉದ್ದೇಶದಿಂದ ಬರೀ ನೆನೆಸಿದ ಕಡಲೆಕಾಯಿಯನ್ನು ತಿಂದಿರುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ತಾವು ಈ ಸಂದರ್ಭದಲ್ಲಿ ದಪ್ಪಗಿದ್ದದ್ದರಿಂದ ಶಾರುಖ್​ ಖಾನ್​ ತಮ್ಮನ್ನು ಎತ್ತಿಕೊಳ್ಳಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಡಯಟ್​ ಮಾಡಿ ಕೇವಲ ಕಡಲೆಕಾಯಿ ತಿಂದದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ. 'ನಾನು ತೂಕ ಕಡಿಮೆ ಮಾಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ವಸ್ತ್ರ ವಿನ್ಯಾಸಕ ಮನೀಶ್ ಅವರು ಚಿಕ್ಕದಾದ ಉಡುಪು ಡಿಸೈನ್​ ಮಾಡಿದ್ದರು. ಬಾದ್​ಶಾ ಚಿತ್ರದಲ್ಲಿನ ‘ಮೊಹಬ್ಬತ್ ಹೋ ಗಯೀ ಹೈ’ ಹಾಡಿಗಾಗಿ ಈ ಉಡುಪನ್ನು ವಿನ್ಯಾಸಗೊಳಿಸಲಾಗಿತ್ತು. ಆ ಉಡುಪನ್ನು ನಾನು ಧರಿಸಿಕೊಳ್ಳಲು ಸಣ್ಣಗಾಗುವ ಅವಶ್ಯಕತೆ ಇತ್ತು. ಶಾರುಖ್​ ಖಾನ್​ ಕೂಡ ನನ್ನನ್ನು ಎತ್ತಿಕೊಳ್ಳಬೇಕಿದ್ದರಿಂದ ನಾನು ಕಷ್ಟಪಟ್ಟು ಈ ಡಯೆಟ್​ ಮಾಡಿದೆ' ಎಂದು ಟ್ವಿಂಕಲ್​ ಹೇಳಿಕೊಂಡಿದ್ದಾರೆ.

ಅದೇ ವೇಳೆ ಹಾಸ್ಯ ಮಾಡಿದ ಅವರು, ಕಡಲೆಕಾಯಿ ತುಂಬಾ ಗ್ಯಾಸ್​. ಶಾರುಖ್​ ಅವರು ನನ್ನನ್ನು ಎತ್ತಿಕೊಂಡಾಗ ಎಲ್ಲಿ ಹೊಟ್ಟೆ ಊದಿಕೊಂಡಿಬಿಟ್ಟರೆ ಗ್ಯಾಸ್​ ಹೊರಬರುತ್ತದೆ ಎಂಬ ಭಯ ಕೂಡ ಕಾಡಿತ್ತು ಎಂದು ಅವರು ಹೇಳಿದ್ದಾರೆ. ಶಾರುಖ್​ ನನ್ನನ್ನು ಎತ್ತಿದರೆ ನಾನು ಗ್ಯಾಸ್ ಬಾಲ್ ನಂತೆ ಇರುತ್ತೇನೆ ಎಂದು ನಾನು ತುಂಬಾ ಹೆದರುತ್ತಿದ್ದೆ, ನನ್ನ ಹೊಟ್ಟೆಯಲ್ಲಿ ಇದ್ದದ್ದು ಬರೀ ಕಡಲೆ ಮಾತ್ರ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net