

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಇಬ್ಬರೂ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಬೆನ್ನಲ್ಲೇ ಇದೀಗ ಅವರ ಮಗನಿಗೂ ಸೋಂಕು ತಗುಲಿತ್ತು ಎನ್ನುವುದನ್ನು ಬಹಿರಂಗಪಡಿಸಲಾಗಿದೆ.
ಈ ಮೊದಲೇ ಸೋಂಕು ತಗುಲಿದ್ದರೂ ಈ ವಿಷಯವನ್ನು ಬಹಿರಂಗಗೊಳಿಸದಿದ್ದ ಟ್ರಂಪ್ ದಂಪತಿ ಇದೀಗ ಮಗ ಸಂಪೂರ್ಣ ಗುಣಮುಖರಾದ ಮೇಲೆ ಮಾಹಿತಿ ನೀಡಿದ್ದಾರೆ.
ಮೊದಲು ನಮಗಿಬ್ಬರಿಗೂ ಸೋಂಕು ದೃಢಪಟ್ಟಿದ್ದಾಗ ಮಗನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಆಗ ನೆಗೆಟಿವ್ ಬಂದಿತ್ತು. ಕೆಲ ದಿನ ಬಿಟ್ಟು ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿತ್ತು. 14 ವರ್ಷದ ಬ್ಯಾರನ್ನಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ, ಆದರೆ ಫಲಿತಾಂಶ ಮಾತ್ರ ಪಾಸಿಟಿವ್ ಬಂದಿತ್ತು ಎಂದು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಬ್ಲಾಗ್‌ನಲ್ಲಿ ತಾಯಿ ಮೆಲಾನಿಯಾ ವಿವರಿಸಿದ್ದಾರೆ.
ಅದೃಷ್ಟವಶಾತ್ ನಮ್ಮ 14 ವರ್ಷದ ಪುತ್ರ ಆರೋಗ್ಯವಂತನಿದ್ದಾನೆ. ಅವನಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯಿದೆ. ಆದ್ದರಿಂದ ಬೇಗ ಚೇತರಿಸಿಕೊಂಡ. ಈಗ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಒಂದು ರೀತಿಯಲ್ಲಿ ನಾವು ಮೂವರು ಒಂದೇ ಸಮಯದಲ್ಲಿ ಸೋಂಕಿಗೆ ತುತ್ತಾಗಿದ್ದರಿಂದ ಸಂತೋಷಪಟ್ಟಿದ್ದೇವೆ. ನಾವು ಒಬ್ಬರಿಗೊಬ್ಬರು ಪರಸ್ಪರ ಎಷ್ಟು ಕಾಳಜಿ ವಹಿಸುತ್ತಿದ್ದೇವೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ಅದೇ ಕಾಳಜಿಯಿಂದಾಗಿ ಇದೀಗ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಮೆಲಾನಿಯಾ.