ಯೋಗಿ ಸಂಪುಟದಿಂದ ಉರುಳಿತು ಮತ್ತೊಂದು ‘ವಿಕೆಟ್‌’! ಮೂವರು ಸಚಿವರು, 9 ಶಾಸಕರ ರಾಜೀನಾಮೆ

Yogi
Published on

ಲಖನೌ: ಉತ್ತರ ಪ್ರದೇಶದಲ್ಲಿ ರಾಜೀನಾಮೆಯ ಪರ್ವ ಶುರುವಾಗಿದೆ. ಇನ್ನೇನು ಚುನಾವಣೆ ಹೊಸ್ತಿನಲ್ಲಿ ಇರುವಾಗಲೇ ಒಬ್ಬರ ಮೇಲೊಬ್ಬ ಸಚಿವರು, ಶಾಸಕರು ರಾಜೀನಾಮೆ ಕೊಡುತ್ತಿದ್ದಾರೆ. ಇದಾಗಲೇ ಇಬ್ಬರು ಸಚಿವರು ರಾಜೀನಾಮೆ ನೀಡಿರುವುದು ನುಂಗಲಾರದ ತುತ್ತಾಗಿರುವ ಹೊತ್ತಿನಲ್ಲಿಯೇ ಇಂದು ಸಚಿವ ಧರಂ ಸಿಂಗ್ ಸೈನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದ ಸೈನಿಯವರು ತಮಗೆ ಮಂಜೂರು ಮಾಡಿದ್ದ ಭದ್ರತೆ ಮತ್ತು ನಿವಾಸವನ್ನು ಬುಧವಾರ (ಡಿ.12) ಹಿಂದಿರುಗಿಸಿದ್ದರು. ಆದ್ದರಿಂದ ಅವರ ರಾಜೀನಾಮೆ ನಿಚ್ಚಳವಾಗಿತ್ತು. ಅದರಂತೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 3 ದಿನಗಳಿಂದ ಬಿಜೆಪಿಗೆ ರಾಜೀನಾಮೆ ನೀಡಿದ 9ನೇ ಶಾಸಕ ಹಾಗೂ 3ನೇ ಸಚಿವರಾಗಿದ್ದಾರೆ ಸೈನಿ.

ಆರಂಭದಲ್ಲಿ ಪ್ರಭಾವಿ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಮೂರೇ ದಿನಗಳಲ್ಲಿ ಈ ಮೂವರು ಸಚಿವರು ಸೇರಿ ಒಟ್ಟು ಒಂಬತ್ತು ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಮೌರ್ಯ ಬಿಜೆಪಿ ತೊರೆದ ನಂತರ ಧರಂ ಸಿಂಗ್ ಸೈನಿ, ಮುಖೇಶ್ ವರ್ಮಾ, ವಿನಯ್ ಶಾಕ್ಯಾ, ರೋಷನ್ ಲಾಲ್ ವರ್ಮಾ, ಬ್ರಜೇಶ್ ಪ್ರಜಾಪತಿ, ಭಗವತಿ ಸಾಗರ್, ದಾರಾ ಸಿಂಗ್ ಚೌಹಾಣ್, ಅವತಾರ್ ಸಿಂಗ್ ಭದಾನ ಅವರು ರಾಜೀನಾಮೆ ನೀಡಿದ್ದಾರೆ.

ಈ ಪೈಕಿ ಮೌರ್ಯ ಹಾಗೂ ಫಿರೋಜಾಬಾದ್ ಜಿಲ್ಲೆಯ ಶಿಕೋಹಬ್ದ್‍ನ ಶಾಸಕ ಮುಖೇಶ್ ವರ್ಮಾ ಸಮಾಜವಾದಿ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.

ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನಿಂದ ಪ್ರತಿದಿನ ಒಂದರಿಂದ ಇಬ್ಬರು ಸಚಿವರು ಹೊರಬರುತ್ತಾರೆ. ಜನವರಿ 20ರ ವೇಳೆಗೆ ಈ ಸಂಖ್ಯೆ 18ಕ್ಕೆ ಏರುತ್ತದೆ ಎಂದು ಹೇಳಿದ್ದರು. ಅದರಂತೆ ಇದೀಗ ಒಬ್ಬೊಬ್ಬರೇ ತಮ್ಮ ಸ್ಥಾನದಿಂದ ಕಳಚಿಕೊಳ್ಳುತ್ತಿದ್ದಾರೆ. ಅಂದಹಾಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net