

ಕೋಲ್ಕತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿಯೊಬ್ಬರು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಸರ್ಕಾರಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಭಾರಿ ಮುಜುಗರ ಉಂಟಾಗಿದೆ.
ಓಲ್ಡ್ ಮಾಲ್ಡಾ ಪಂಚಾಯತ್ ಸಮಿತಿಯ ಅಧ್ಯಕ್ಷೆ ಮೃಣಾಲಿನಿ ಮೊಂಡಲ್ ಮೇಟಿ ಅವರು ಪಿಸ್ತೂಲ್ ಹಿಡಿದು ಪೋಸ್ ಕೊಟ್ಟಿದ್ದು, ಇದೀಗ ಭಾರಿ ವೈರಲ್ ಆಗಿದ್ದು, ಕೋಲಾಹಲ ಸೃಷ್ಟಿಸಿದೆ. ಇವರು ಈ ರೀತಿ ಮಾಡುತ್ತಿರುವುದನ್ನು ಅಲ್ಲಿಯೇ ಇದ್ದ ಒಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಇಷ್ಟೆಲ್ಲಾ ಎಡವಟ್ಟಿಗೆ ಕಾರಣವಾಗಿದೆ.
ಫೋಟೋ ವೈರಲ್ ಆಗುತ್ತಿದ್ದಂತೆಯೇ ಟಿಎಂಸಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆದಿದೆ. ಈಕೆಯ ಮನೆಯನ್ನು ಶೋಧಿಸಿದರೆ ಬಾಂಬ್, ರೈಫಲ್ ಕೂಡ ಸಿಗುತ್ತದೆ. ಇದು ಟಿಎಂಸಿ ಸಂಸ್ಕೃತಿ. ಕೆಲಸ ಕಳೆದುಕೊಳ್ಳುವ ಭೀತಿಯಿಂದ ಪೊಲೀಸರು ಏನನ್ನೂ ಮಾಡುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗೋವಿಂದ ಚಂದ್ರ ಮೊಂಡಲ್ ಆರೋಪಿಸಿದ್ದಾರೆ.
ಇದು ನಿಜವಾದ ಪಿಸ್ತೂಲಾ, ಅಥವಾ ಆಟಿಕೆ ಪಿಸ್ತೂಲಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇದು ನಿಜವಾಗಿರುವ ಗನ್ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದಿರುವ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಂದು ನಾರಾಯಣ ಚೌಧರಿ, ಆಕೆಯ ವರ್ತನೆಯಿಂದ ಪಕ್ಷಕ್ಕೆ ಹಾನಿಯಾಗಿದೆ ಎಂದಿದ್ದಾರೆ.