ಉಗ್ರರ ಗುಂಡೇಟಿಗೆ ಖ್ಯಾತ ನಟಿ ಬಲಿ: ಮನೆಗೆ ಬಂದು ದಾಳಿ ಮಾಡಿದ ಭಯೋತ್ಪಾದಕರು!

actress
Published on

ಕಾಶ್ಮೀರ: ಕಾಶ್ಮೀರದಲ್ಲಿ ಗುಂಡಿನ ಕಾಳಗ ನಿಲ್ಲುತ್ತಿಲ್ಲ. ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಭಯೋತ್ಪಾದಕರು ಖ್ಯಾತ ನಟಿ, ಗಾಯಕಿ ಅಮ್ರೀನ್ ಭಟ್ (35) ಅವರನ್ನು ಕೊಲೆ ಮಾಡಿದ್ದಾರೆ. ಅಮ್ರೀನ್​ ಅವರ ಮನೆಗೆ ನುಗ್ಗಿದ ಉಗ್ರರು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ 10 ವರ್ಷದ ಅಮ್ರೀನ್​ ಅವರ ಸೋದರಳಿಯ ಗಾಯಗೊಂಡಿದ್ದಾನೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಯ ಮೂವರು ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಯಲ್ಲಿ ಗುಂಡು ಹಾರಿದ್ದರಿಂದ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಗುಂಡಿನ ದಾಳಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

ಅಮ್ರೀನ್ ಭಟ್ ಟಿವಿ ಕಲಾವಿದೆ ಮತ್ತು ಗಾಯಕಿಯಾಗಿ ಗುರುತಿಸಿಕೊಂಡವರು. ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಹಾಡುವ ವಿಡಿಯೋಗಳಿಗೆ ಭಾರಿ ಬೇಡಿಕೆ ಇತ್ತು.

ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಇದು ತುಂಬಾ ದುಃಖಕರವಾಗಿರುವ ವಿಷಯ ಎಂದಿದ್ದಾರೆ. ಹೀಗೆ ಅಮಾಯಕರು, ಮಹಿಳೆಯರ ಮೇಲೆ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಹಲವು ಪಕ್ಷಗಳ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net