ಮಗಳು ತವರಿಗೆ ಬಂದರೂ ನಿಲ್ಲದ ಅಳಿಯನ ಹಿಂಸೆ: ತಂದೆ ಸೇರಿ ಮೂವರ ಆತ್ಮಹತ್ಯೆ!

suicide
Published on

ಕಡಪ (ಆಂಧ್ರ ಪ್ರದೇಶ): ಒಬ್ಬ ಸಾಫ್ಟ್‌ವೇರ್‌ ಇಂಜಿಯರ್‌ ಅಳಿಯನ ದೌರ್ಜನ್ಯ ಮೂರು ಮಂದಿಯನ್ನು ಬಲಿ ಪಡೆದಿರುವ ದುರಂತ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಆರ್‌. ಸುರೇಶ್‌ ಕುಮಾರ್‌ ರೆಡ್ಡಿ ಎಂಬಾತ ತನ್ನ ಪತ್ನಿಗೆ ನೀಡುತ್ತಿದ್ದ ದೌರ್ಜನ್ಯದಿಂದಾಗಿ ಪತ್ನಿ ಮಾತ್ರವಲ್ಲದೇ ಆಕೆಯ ತಂದೆ ಹಾಗೂ ಸಹೋದರಿಯರೂ ಸಾವಿಗೆ ಶರಣಾಗಿರುವ ಘಟನೆ ಇದು! ತನ್ನ ಅಳಿಯ ಸುರೇಶ್‌ ಕುಮಾರ್‌ನ ನೀಚ ಕೃತ್ಯದ ಕುರಿತು ಸೆಲ್ಫಿ ವಿಡಿಯೋ ಮಾಡಿ ಆತನ ಮಾವ ಬಾಬು ರೆಡ್ಡಿ (55) ಅವರು ಮೃತಪಟ್ಟರೆ, ತಂದೆಯ ಸಾವಿನಿಂದ ಕೊರಗಿದ ಸುರೇಶ್‌ಕುಮಾರ್‌ನ ಹೆಂಡತಿ ಶ್ವೇತಾ ರೆಡ್ಡಿ (26) ಹಾಗೂ ಶ್ವೇತಾರ ತಂಗಿ ಸಾಯಿ ರೆಡ್ಡಿ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ವೇತಾ ಅವರ ವಿವಾಹ ಸುರೇಶ್‌ ಕುಮಾರ‌ನ ಜತೆ ಕಳೆದ ವರ್ಷ ನಡೆದಿತ್ತು. ವಿವಾಹದ ಆರಂಭದಿಂದಲೂ ದಂಪತಿ ನಡುವೆ ಆಗಾಗ ಭಿನ್ನಾಭಿಪ್ರಾಯ ಉಂಟಾಗಿ ಜಗಳ ನಡೆಯುತ್ತಿತ್ತು. ಇದರಿಂದ ಬೇಸರಗೊಂಡ ಶ್ವೇತಾ ಇತ್ತೀಚೆಗೆ ತವರಿಗೆ ವಾಪಸಾಗಿದ್ದರು. ಆದರೂ ಆಕೆಯ ಗಂಡನ ಕಾಟ ಮುಂದುವರೆದಿತ್ತು. ಶ್ವೇತಾರ ತವರಿಗೆ ಬಂದು ಆತ ಹಿಂಸೆ ಕೊಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದರಿಂದ ಶ್ವೇತಾ ಸದಾ ಕಣ್ಣೀರು ಹಾಕುತ್ತಿದ್ದರು. ಮದುವೆಯಾದ ದಿನದಿಂದ ತಮಗಾಗಿರುವ ನೋವನ್ನು ತಂದೆಯ ಮುಂದೆ ತೋಡಿಕೊಳ್ಳುತ್ತಿದ್ದರು. ತಮ್ಮ ಮುದ್ದಾದ ಮಗಳನ್ನು ಈ ಕಟುಕನ ಕೈಗೆ ನೀಡಿದೆ ಎಂದು ನೊಂದುಕೊಂಡ ಶ್ವೇತಾರ ಅಪ್ಪ, ಬಾಬು ರೆಡ್ಡಿ ಅವರು ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಅದರಲ್ಲಿ, ಅಳಿಯ ಸುರೇಶ್ ರೆಡ್ಡಿ ನನ್ನ ಸಾವಿಗೆ ಕಾರಣನಾಗಿದ್ದಾನೆ. ಅಲ್ಲದೇ ಆತನ ಅಪರಾಧಗಳಿಗೆ ಶಿಕ್ಷೆ ವಿಧಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ತಂದೆ ಆತ್ಮಹತ್ಯೆಯಿಂದ ಕಂಗಾಲಾದ ಶ್ವೇತಾ ಮತ್ತು ಸಾಯಿ ಶನಿವಾರ ಬೆಳಗ್ಗೆ ಯೆರಗುಂಟ್ಲಾ ಮಂಡಲದ ಬಳಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net