

ಭುವನೇಶ್ವರ: ಸಾಕು ಪ್ರಾಣಿಗಳು ಎಷ್ಟೋ ಬಾರಿ ಮನೆಮಾಲೀಕರನ್ನು ಕಾಪಾಡುವುದಿದೆ. ಅಂಥದ್ದೇ ಒಂದು ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಬೆಕ್ಕೊಂದು ತನ್ನ ಜೀವದ ಹಂಗು ತೊರೆದು ಮನೆಅಂಗಳಕ್ಕೆ ಬಂದ ನಾಗರಹಾವನ್ನು ಒಳಕ್ಕೆ ಬಿಡದೇ ಸುಮಾರು ಅರ್ಧ ಗಂಟೆ ಕಾದು ಕುಳಿತ ಘಟನೆ ಇದಾಗಿದೆ.
ಭುವನೇಶ್ವರದ ಸಂಪದ್ ಕುಮಾರ್ ಫರಿದಾ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರ ಮನೆ ಅಂಗಳಕ್ಕೆ ಬಂದ ನಾಗರ ಹಾವು ಒಳಗೆ ಪ್ರವೇಶಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ನೋಡಿದ ಅವರ ಮನೆಯ ಬೆಕ್ಕು ಬಾಗಿಲ ಬಳಿ ನಿಂತಿದೆ. ಅದು ಕೂಗಿಕೊಂಡ ಶಬ್ದ ಕೇಳಿದ ಮನೆಯವರು ಓಡಿ ಬಂದು ನೋಡಿದಾಗ ನಾಗರಹಾವು ಹೆಡೆ ಬಿಚ್ಚಿ ನಿಂತಿದ್ದು, ಬೆಕ್ಕು ಬಾಗಿಲನ್ನು ಕಾಯುತ್ತಿರುವ ದೃಶ್ಯ ಕಂಡಿದ್ದಾರೆ.
ಕೂಡಲೇ ಅವರು ಹಾವು ರಕ್ಷಣಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸಹಾಯಕ್ಕೆ ಸಿಬ್ಬಂದಿ ಬರುವಷ್ಟರಲ್ಲಿ ಹಾವು ಮನೆಯೊಳಗೆ ಪ್ರವೇಶಿಸಲು ಸುಮಾರು ಬಾರಿ ಪ್ರಯತ್ನಿಸಿದೆ. ಆದರೆ ಬೆಕ್ಕು ಮಾತ್ರ ಅದನ್ನು ತಡೆದು ನಿಲ್ಲಿಸಿದೆ. ನಂತರ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಹಾವು ವಾಪಸ್ ಹೋಗುವಷ್ಟರಲ್ಲಿ ಸಹಾಯವಾಣಿಯ ಸಿಬ್ಬಂದಿ ಬಂದು ಹಾವನ್ನು ಹಿಡಿದಿದ್ದಾರೆ.
"ಬೆಕ್ಕಿಗೆ ಈಗ ಒಂದೂವರೆ ವರ್ಷ. ನಮ್ಮ ಮನೆಯ ಸದಸ್ಯನೇ ಆಗಿಬಿಟ್ಟಿದೆ. ಇದು ಹಾವು ಮನೆಯೊಳಗೆ ಹೋಗದಂತೆ ತಡೆದಿದೆ" ಎಂದು ಫರೀದಾ ಹೇಳಿದರು.