ಬ್ಲಾಕ್​ಬಸ್ಟರ್​ ಸಿನಿಮಾ 'ಪುಷ್ಪಾ' ನೋಡಿ ಪ್ರೇರೇಪಿತನಾದ ಅಭಿಮಾನಿ ಈಗ ಪೊಲೀಸರ ಅತಿಥಿ!

pushpa
Published on

ಕೋಲ್ಕತಾ (ಪಶ್ಚಿಮ ಬಂಗಳ): ಸಿನಿಮಾ ನೋಡಿ ಅದರಂತೆ ಅನುಸರಿಸಲು ಹೋಗಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡವರು ಇದ್ದಾರೆ, ತಮ್ಮ ನೆಚ್ಚಿನ ಹೀರೋಗಳನ್ನು ಅನುಸರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದವರೂ ಇದ್ದಾರೆ. ಇದು ಕೇವಲ ಕಥೆ, ನಿಜವಾದದ್ದಲ್ಲ ಎನ್ನುವುದನ್ನೂ ಅರಿಯದೇ ಅನುಸರಿಸುವವರು ಹಲವರು. ಇದೀಗ ಅಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪುಷ್ಪಾ: ದಿ ರೈಸ್ ಬ್ಲಾಕ್​ಬಸ್ಟರ್​ ಸಿನಿಮಾ ನೋಡಿ ಅದರಿಂದ ಉತ್ತೇಜಿತನಾದ ಅಭಿಮಾನಿಯೊಬ್ಬ. ತೇಗದ ಮರದ ಕಳ್ಳ ಸಾಗಣಿಕೆ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪುಷ್ಪ ಸಿನಿಮಾದ ಕಥೆಯಲ್ಲಿ ಇರುವುದು ಲೂಟಿಯೇ. ಈ ಸಿನಿಮಾದ ಕಥಾ ನಾಯಕ ಪುಷ್ಪಾ ಮರಗಳ ಕಳ್ಳ ಸಾಗಣೆಯ ಮೂಲಕ ಸಂಪತ್ತನ್ನು ಸಂಗ್ರಹಿಸುತ್ತಾನೆ. ಜತೆಗೆ ವಿವಿಧ ಕಳ್ಳ ಸಾಗಣಿಕೆದಾರರ ನೇತೃತ್ವ ವಹಿಸುತ್ತಾನೆ, ಈ ಸಂದರ್ಭದಲ್ಲಿ ಬೇರೆ ಬೇರೆ ಉಪಾಯಗಳ ಮೂಲಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವುದನ್ನು ಈ ಸಿನಿಮಾದಲ್ಲಿ ಕಾಣಬಹುದು.

ಅದರಂತೆ ಅನುಸರಿಸಲು ಹೋಗಿದ್ದಾನೆ ಕೋಲ್ಕತಾದ ವ್ಯಕ್ತಿ. ಸ್ಲೀಪರ್ ಬಸ್ ಒಂದರಲ್ಲಿ ತೇಗದ ಮರದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಪಶ್ಚಿಮ ಬಂಗಾಳದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವಿನ್ ಕಸ್ವಾನ್ ಈ ಘಟನೆಯನ್ನು ವಿವರಿಸುತ್ತಾ ಪುಷ್ಪಾ ಚಿತ್ರದ ಬಗ್ಗೆ ತಮಾಷೆಯಾಗಿ ಬರೆದಿದ್ದಾರೆ.

ಸ್ಲೀಪರ್ ಬಸ್ ಒಂದರಲ್ಲಿ ತೇಗದ ಮರದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಪೋಲೀಸರು ಆ ಬಸ್ಸನ್ನು ಮಂಗಳವಾರ ಬೆಳಗ್ಗಿನ ಜಾವ 3.30 ನಿಮಿಷಕ್ಕೆ ತಡೆದು ನಿಲ್ಲಿಸಿದರು. ಊಹಿಸಿಕೊಳ್ಳಿ, ಒಂದು ವೋಲ್ವೋ ಸ್ಲೀಪರ್ ಬಸ್ಸನ್ನು ತೇಗದ ಮರದ ಕಳ್ಳ ಸಾಗಣಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಹೇಗಿರಬೇಡ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಇದು ಸಿನಿಮಾ ಅಲ್ಲ ಎಂದು ಈ ಪುಷ್ಪಂಗೆ ತಿಳಿಯಲಿಲ್ಲ. ನಮ್ಮ ತಂಡಗಳನ್ನು ಕಡಿಮೆ ಎಂದು ಅಂದಾಜಿಸಿಬಿಟ್ಟಿದ್ದಾನೆ. ಒಳ್ಳೆಯದೇ ಆಯಿತು, ಸದ್ಯ ನಮ್ಮ ಬಳಿ ಒಂದು ಡೀಲಕ್ಸ್ ಬಸ್ ಇದೆ ಎಂದು ತಮಾಷೆ ಮಾಡಿದ್ದಾರೆ.

ಕಸ್ವಾನ್ ಅವರ ಈ ಟ್ವೀಟ್‍ಗೆ ನೆಟ್ಟಿಗರಿಂದ ಹಲವಾರು ಬಗೆಯ ತಮಾಷೆಯ ಪ್ರತಿಕ್ರಿಯೆಗಳು ಮತ್ತು ಅರಣ್ಯ ಅಧಿಕಾರಿಗಳ ಕುರಿತು ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net