

ರಂಗಾರೆಡ್ಡಿ (ತೆಲಂಗಾಣ): ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಜವರಾಯನ ರೂಪದಲ್ಲಿ ಬಂದ ಕಾರು ಚಾಲಕ ಈ ಸಹೋದರಿಯರ ಪ್ರಾಣವನ್ನು ಕಸಿದುಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಪ್ರೇಮಿಕಾ ಹಾಗೂ ಅಕ್ಷಯಾ ಸಹೋದರಿಯರು ಮೃತಪಟ್ಟಿದ್ದು, ಅವರ ಸಂಬಂಧಿ ಸೌಮ್ಯಾ ಅಪಘಾತದಲ್ಲಿ ಭಾರಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ನ ರೆಡ್ಡಿಪಲ್ಲಿ ಗ್ರಾಮದ ಶಿಕ್ಷಕ ಲಕ್ಷ್ಮಣ್ ಅವರ ಇಬ್ಬರೂ ಮಕ್ಕಳು ಮೃತ ದುರ್ದೈವಿಗಳು. ಪ್ರೇಮಿಕಾ ಹಾಗೂ ಅಕ್ಷಯಾ ದೊಡ್ಡಪ್ಪನ ಮಗಳು ಸೌಮ್ಯಾ ಜತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಮೂವರೂ ಕೆಳಕ್ಕೆ ಬಿದ್ದಿದ್ದಾರೆ, ಬಿದ್ದ ರಭಸದಲ್ಲಿ ಪ್ರೇಮಿಕಾ ಸ್ಥಳದಲ್ಲಿಯೇ ಮೃತಪಟ್ಟರೆ, ಅಕ್ಷಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸೌಮ್ಯಾಳಿಗೆ ಚಿಕಿತ್ಸೆ ಮುಂದುವರೆದಿದೆ. ಈಕೆಯ ಸ್ಥಿತಿ ಗಂಭೀರವಾಗಿದ್ದು, ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿರುವುದಾಗಿ ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಅತಿಯಾದ ವೇಗದಿಂದ ಆತ ಕಾರು ಚಲಾಯಿಸುತ್ತಿದ್ದ. ಇದರಿಂದ ಅಪಘಾತ ಸಮಭವಿಸಿದೆ. ಆದಷ್ಟು ಬೇಗ ಆತನ ಬಂಧಿಸಲಾಗುವುದು ಎಂದಿದ್ದಾರೆ. ಎರಡೂ ಮಕ್ಕಳನ್ನು ಕಳೆದುಕೊಂಡ ಅಪ್ಪ-ಅಮ್ಮನ ಕಣ್ಣೀರು ಮಾತ್ರ ನೋಡಲಾಗುತ್ತಿಲ್ಲ.