

ಪಟ್ನಾ: ಬಿಜೆಪಿಯ ಮಾಜಿ ಶಾಸಕರ ಇಬ್ಬರು ಸಹೋದರರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಪತ್ರಕಾರ್ ನಗರದಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೇ ಈ ಕೃತ್ಯ ಎಸಗಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಬಂದಿದ್ದ ಬೈಕ್ನಲ್ಲಿ 'ಪ್ರೆಸ್' ಎಂದು ಬರೆಯಲಾಗಿತ್ತು ಎನ್ನಲಾಗಿದೆ.
ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಸಹೋದರರಾದ ಶಂಭು ಶರಣ್ ಮತ್ತು ಗೌತಮ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಹೋದರರ ಪೈಕಿ ಒಬ್ಬರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿಯೇ ಪ್ರಾಣ ಬಿಟ್ಟಿದ್ದರೆ, ಶಂಭು ಅವರು ರಾತ್ರಿ ಪ್ರಾಣ ತ್ಯಜಿಸಿರುವುದಾಗಿ ತಿಳಿದುಬಂದಿದೆ. ಈ ಕೊಲೆಗೆ ನೀಮಾ ನಿವಾಸಿ ಪಾಂಡವ್ ಗ್ಯಾಂಗ್‌ನ ಕಿಂಗ್‌ಪಿನ್ ಸಂಜಯ್ ಸಿಂಗ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಘಟನೆಗೆ ಕಾರಣ ಗ್ಯಾಂಗ್ ವಾರ್ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಯುತ್ತಿದೆ. ಅಪರಾಧಿಗಳ ಪತ್ತೆಗೆ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಲಾಗುತ್ತಿದೆ.