ಭಾರತಕ್ಕೆ ಮರಳುತ್ತಿದ್ದ ಏಳು ಮಂದಿ ಭಾರತೀಯರ ಅಪಹರಣ ಮಾಡಿದ ಲಿಬಿಯಾ

lybia
Published on

ನವದೆಹಲಿ: ಏಳು ಮಂದಿ ಭಾರತೀಯರನ್ನು ಆಫ್ರಿಕನ್ ದೇಶದ ಲಿಬಿಯಾದಲ್ಲಿ ಅಪಹರಿಸಲಾಗಿದೆ.

ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶದಕ್ಕೆ ಸೇರಿದ ಏಳು ಮಂದಿ ಕಳೆದ ತಿಂಗಳು ಅಪಹರಣಕ್ಕೀಡಾಗಿದ್ದಾರೆ.

ಸದ್ಯ ಲಿಬಿಯಾ ಅಧಿಕಾರಿಗಳ ಜತೆ ಭಾರತ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಸೆಪ್ಟೆಂಬರ್ 14ರಂದು ಭಾರತಕ್ಕೆ ವಿಮಾನ ಹಿಡಿಯಲು ಟ್ರಿಪೊಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಶ್ವೆರಿಫ್ ಎಂಬ ಸ್ಥಳದಲ್ಲಿ ಏಳು ಮಂದಿ ಭಾರತೀಐರನ್ನು ಅಪಹರಿಸಲಾಗಿದೆ. ಇವರೆಲ್ಲರೂ ನಿರ್ಮಾಣ ಮತ್ತು ತೈಲ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಶ್ರೀವಾಸ್ತವ ಹೇಳಿದರು.

ಇವರೆಲ್ಲರೂ ಕೆಲಸ ಮಾಡುತ್ತಿದ್ದ ತೈಲ ಕಂಪನಿಯ ಅಧಿಕಾರಿಗಳು ಈಗಾಗಲೇ ಅಪಹರಣಕಾರರೊಂದಿಗೆ ಮಾತನಾಡಿದ್ದಾರೆ.

ಅಪಹರಣಕಾರರು ಕಳುಹಿಸಿರುವ ಫೋಟೋಗಳ ಮೂಲಕ ಎಲ್ಲರೂ ಸದ್ಯ ಸುರಕ್ಷಿತವಾಗಿರುವುದು ಖಚಿತವಾಗಿದೆ. ಅವರನ್ನು ರಕ್ಷಿಸುವ ಬಗ್ಗೆಯೂ ಅಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಧ್ಯಮದವರಿಗೆ ಅವರು ವಿವರಿಸಿದರು.

ಭಾರತ ಕೂಡ ಈ ಬಗ್ಗೆ ಕಾರ್ಯೋನ್ಮುಖವಾಗಿದೆ. ಅಪಹರಣಕ್ಕೊಳಗಾದ ಭಾರತೀಯರ ಕುಟುಂಬಸ್ಥರ ಜತೆಯೂ ಮಾತುಕತೆ ನಡೆಸಿ, ಧೈರ್ಯ ತುಂಬಲಾಗಿದೆ. ಭಾರತೀಯರನ್ನು ಪತ್ತೆಹಚ್ಚಲು ಮತ್ತು ಅವರ ಸೆರೆಯಿಂದ ಬೇಗನೆ ಬಿಡುಗಡೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.

ಉತ್ತರ ಆಫ್ರಿಕಾದ ತೈಲ ಸಂಪದ್ಭರಿತ ದೇಶವಾದ ಲಿಬಿಯಾ 2011ರಲ್ಲಿ ಮುಅಮ್ಮರ್ ಗಡಾಫಿಯ ನಾಲ್ಕು ದಶಕಗಳ ಆಡಳಿತದ ಪತನದ ನಂತರ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಅಶಾಂತಿಗೆ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net