

ಕೋಲ್ಕತಾ: ಪಶ್ಚಿಮ ಬಂಗಾಳಕ್ಕೆ ಇನ್ನೇನು ಚುನಾವಣಾ ದಿನಗಳು ಹತ್ತಿರವಾಗುತ್ತಿದೆ. ಇದರ ಬೆನ್ನಲ್ಲೇ ಸಾಲು ಸಾಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಸಂಪುಟಕ್ಕೆ ಬೆನ್ನುಹಾಕಿ ಹೋಗುತ್ತಿದ್ದಾರೆ.
ಮೇ ತಿಂಗಳಷ್ಟರಲ್ಲಿ ಸುಮಾರು ಏಳು ಬಿಜೆಪಿ ಸಂಸದರು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಹೇಳಿಕೆ ನೀಡಿದ್ದರ ಪ್ರತಿಯಾಗಿ, ಮುಂದಿನ ತಿಂಗಳಷ್ಟರ ಹೊತ್ತಿಗೆ ತೃಣಮೂಲ ಕಾಂಗ್ರೆಸ್ ನಿಂದ ಐವತ್ತು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್ ತಿರುಗೇಟು ನೀಡಿದ್ದರು. ದಿಲೀಪ್ ಘೋಷ್ ಅವರ ಈ ಹೇಳಿಕೆ ಏಕೋ ನಿಜವಾಗುವ ಲಕ್ಷಣಗಳು ತೋರುತ್ತಿವೆ.
ಬಿರ್ಭುಮ್ ಸಂಸದೆ ಸತಾಬ್ಡಿ ರಾಯ್ ಅವರು ಆಡಳಿತ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಫೇಸ್ಬುಕ್ನಲ್ಲಿ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಹಾಗೂ ರಾಜಕಾರಣಿ ತನ್ನ ಕ್ಷೇತ್ರದಲ್ಲಿ ನಡೆದ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನನಗೇ ಮಾಹಿತಿ ನೀಡುತ್ತಿಲ್ಲ. ಇದು ನನಗೆ ಮಾನಸಿಕ ನೋವು ಉಂಟುಮಾಡಿದೆ ಎಂದು ಹೇಳಿದ್ದಾರೆ.
ಆದ್ದರಿಂದ ತಾವು ಪಕ್ಷ ತೊರೆಯುವ ನಿರ್ಧಾರ ಮಾಡಿದ್ದು, ಈ ಬಗ್ಗೆ ಬರುವ ಸೋಮವಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಮೂರು ಬಾರಿ ಬಿರ್ಭುಮ್ ಕ್ಷೇತ್ರದಿಂದ ಇವರು ಸಂಸದೆಯಾಗಿದ್ದಾರೆ.
ಗುರುವಾರ ಫೇಸ್ ಬುಕ್ ನಲ್ಲಿ ಶತಾಬ್ದಿ ರಾಯ್, "ನಾನು ಒಂದು ಮುಖ್ಯ ತೀರ್ಮಾನ ತೆಗೆದುಕೊಳ್ಳಲಿದ್ದೇನೆ. ಆ ತೀರ್ಮಾನವನ್ನು ನಿಮಗೆ ಜನವರಿ 16ರಂದು ಮಧ್ಯಾಹ್ನ 2 ಗಂಟೆಗೆ ನಿಮ್ಮ ಮುಂದಿಡಲಿದ್ದೇನೆ" ಎಂದು ಫ್ಯಾನ್ ಕ್ಲಬ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ನಿಮ್ಮೊಂದಿಗೆ ಸಂಪೂರ್ಣವಾಗಿ ತೊಡಗಿಕೊಳ್ಳುವ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೇನೆ. 2009ರಿಂದಲೂ ನಾನು ನಿಮ್ಮೊಂದಿಗಿದ್ದು, ನನಗೆ ಬೆಂಬಲ ನೀಡಿದ್ದೀರಿ. ಲೋಕಸಭೆಗೂ ಕಳುಹಿಸಿದ್ದೀರಿ. ಭವಿಷ್ಯದಲ್ಲಿಯೂ ನಿಮ್ಮ ಬೆಂಬಲ ಇರುತ್ತದೆ ಎಂದು ನಂಬಿದ್ದೇನೆ. ನನ್ನನ್ನು ಪಶ್ಚಿಮ ಬಂಗಾಳದ ಜನರು ತುಂಬಾ ಪ್ರೀತಿಸಿದ್ದಾರೆ. ಅವರೆಡೆಗೆ ನನ್ನ ಕರ್ತವ್ಯವನ್ನು ನಾನು ಪೂರೈಸುತ್ತೇನೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಜನವರಿ 16ರಂದು ತಿಳಿಸುತ್ತೇನೆ ಎಂದಿದ್ದಾರೆ.
ಈ ಪೋಸ್ಟ್ ಅನ್ನು ಅವರೇ ಫ್ಯಾನ್ ಕ್ಲಬ್ನಲ್ಲಿ ಅಧಿಕೃತವಾಗಿ ಹಾಕಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಆದರೆ ಈ ಪೋಸ್ಟ್ ಹಾಕಿದ ನಂತರ ರಾಯ್ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ.