

ಮುಂಬೈ: ಮುಂಬೈನ ಕೋರೇಂಗಾವ್ನಲ್ಲಿರುವ ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್ ಹಿನ್ನೆಲೆಯಲ್ಲಿ ಇಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹಾಜರಾಗಲಿದ್ದಾರೆ.
ಕೆಲ ದಿನಗಳ ಹಿಂದೆ ಇಡಿ ನೋಟಿಸ್ ಜಾರಿ ಮಾಡಿದ್ದಾಗ ತಾವು ಹಾಜರು ಆಗಲು ಸಾಧ್ಯವಿಲ್ಲ, ಬೇರೆ ಕೆಲಸವಿದೆ ಎಂದಿದ್ದರು. ಶಿವಸೇನಾ ನಾಯಕ ಏಕನಾಥ ಶಿಂಧೆ ಬಣ ಬಂಡಾಯವೆದ್ದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಉದ್ಧವ್ ಠಾಕ್ರೆಯವರನ್ನು ಕೆಳಕ್ಕೆ ಇಳಿಸಬಾರದು ಎಂಬ ಪ್ರಯತ್ನದಲ್ಲಿ ರಾವತ್ ತೊಡಗಿದ್ದರು. ಆದರೆ ಇದೀಗ ಠಾಕ್ರೆ ಖುರ್ಚಿಯಿಂದ ಇಳಿದು ಆ ಸ್ಥಾನಕ್ಕೆ ಶಿಂಧೆ ಬರುತ್ತಿದ್ದಂತೆಯೇ ಈಗ ಇಡಿ ಮುಂದೆ ಹಾಜರಾಗಲು ರೆಡಿಯಾಗಿದ್ದಾರೆ. ಇಡಿ ಎರಡನೆಯ ಬಾರಿ ಇವರಿಗೆ ಸಮನ್ಸ್ ಜಾರಿ ಮಾಡಿತ್ತು.
ಈ ಸಂಬಂಧ ಟ್ವೀಟ್ ಮಾಡಿರುವ ಸಂಜಯ್ ರಾವುತ್ ಇಂದು ಮಧ್ಯಾಹ್ನ ಇಡಿ ಕಚೇರಿಗೆ ಹಾಜರಾಗಲಿದ್ದೇನೆ ಎಂದು ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಇಡಿ ಮುಂದೆ ಹಾಜರಾಗುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಇಡಿ ನೀಡಿರುವ ಸಮನ್ಸ್ ಗೌರವಿಸುತ್ತೇನೆ. ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡುವುದು ತಮ್ಮ ಆದ್ಯ ಕರ್ತವ್ಯ. ಇಡಿ ಕಚೇರಿ ಬಳಿ ಯಾರೂ ಜಮಾಯಿಸದಂತೆ ಇದೇ ವೇಳೆ ಟ್ವೀಟ್ ಮೂಲಕ ಸಂಜಯ್ ರಾವತ್ ಪಕ್ಷದ ಕಾರ್ಯಕರ್ತರಿಗೆ ಮನವಿ ಕೂಡ ಮಾಡಿದ್ದಾರೆ.
47 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರವೀಣ್ ಜತೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಸಂಜಯ್ ರಾವತ್ ಮೇಲಿದ್ದು, 1,034 ಕೋಟಿ ರೂ. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಭೂ ಅಭಿವೃದ್ಧಿ ಹಗರಣದಲ್ಲಿ ರಾವತ್ಗೆ ಸಂಬಂಧಿಸಿದ 9 ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಿದೆ. ರಾವತ್ ಪತ್ನಿಗೆ ಸಂಬಂಧಿಸಿದ 2 ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ. 672 ಕುಟುಂಬಗಳಿಗೆ ಇ-ಟೆಂಡರ್ ಮೂಲಕ ಮನೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಹಫ್ತಾ, ಹವಾಲ, ವಿದೇಶಿ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ.