

ಗಾಂಧಿನಗರ (ಗುಜರಾತ್): ರೋಬೋ ಸೃಷ್ಟಿಸಿ ಎಂತೆಂಥ ಅದ್ಭುತ ಕೆಲಸ ಕಾರ್ಯಗಳನ್ನು ಅದರ ಕೈಯಿಂದ ಮಾಡಿಸಿಕೊಳ್ಳುತ್ತಿರುವುದು ತಿಳಿದ ವಿಷಯವೇ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಈ ‘ಸೃಷ್ಟಿಕರ್ತ’ರು ಮನುಷ್ಯನ ಜತೆ ಬ್ಯಾಡ್ಮಿಂಟನ್ ಆಡುವ ರೋಬೋ ಕಂಡುಹಿಡಿದಿದ್ದಾರೆ.
ಗುಜರಾತ್ ಸೈನ್ಸ್ ಸಿಟಿಯಲ್ಲಿ ಇಂಥದ್ದೊಂದು ರೊಬೋಟ್ ತಯಾರಿಸಲಾಗಿದೆ. ಬ್ಯಾಂಡ್ಮಿಂಟನ್ ಆಟಕ್ಕೆ ಸೂಕ್ತ ತರಬೇತಿ, ಆಟವಾಡಲು ಶಕ್ತಿ, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು ಎನ್ನುತ್ತಾರೆ. ಆದರೆ ಜೀವವೂ ಇಲ್ಲದೇ, ಸ್ವಂತ ಬುದ್ಧಿಯೂ ಇಲ್ಲದೇ ಕೃತಕ ಬುದ್ಧಿಮತ್ತೆಯ ಮೂಲಕವೂ ಆಡಬಹುದು ಎಂದು ಈ ರೋಬೋ ತೋರಿಸಿಕೊಟ್ಟಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನಾವು, ಒಂದು ಕಡೆ ಆಟಗಾರ ನಿಂತಿರುವುದನ್ನು ಹಾಗೂ ಇನ್ನೊಂದು ಕಡೆ ರೋಬೋ ಇರುವುದನ್ನು ನೋಡಬಹುದು. ಆಟಗಾರ ಕೊಟ್ಟ ಶಾಟ್ಗೆ ರೊಬೋಟ್ ಕೂಡ ಸರಿಯಾಗಿ ಶಾಟ್ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವರು ಸ್ನೇಹಿತರಿಲ್ಲದ ವ್ಯಕ್ತಿಗಳಿಗೆ ಈ ರೊಬೋಟ್ ಒಳ್ಳೆಯ ಸ್ನೇಹಿತನಾಗಿ ಬ್ಯಾಡ್ಮಿಂಟನ್ಗೆ ಜತೆಯಾಗಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಅಂದ ಹಾಗೆ ಈ ರೋಬೋಟ್ ತನ್ನ ಇಲೆಕ್ಟ್ರಾನಿಕ್ ಕಣ್ಣುಗಳಿಂದ ಶೆಟಲ್ಕಾಕ್ ಅನ್ನು ಗುರುತಿಸುತ್ತದೆ. ಸೆನ್ಸಾರ್ ಮೂಲಕ ಕ್ರೀಡಾಂಗಣದ ಸುತ್ತ ತಿರುಗುತ್ತದೆ ಎಂದು ಸೈನ್ಸ್ ಸಿಟಿ ತಿಳಿಸಿದೆ.