

ರಾಜ್‌ಕೋಟ್: ಗುಜರಾತಿನ ರಾಜ್ಕೋಟ್ನ ರಾಜಮನೆತನವೀಗ ಕೋರ್ಟ್ ಬಾಗಿಲಿಗೆ ಹೋಗಿದೆ. ಅಣ್ಣನ ವಿರುದ್ಧ 1500 ಕೋಟಿ ರೂಪಾಯಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂಗಿ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದಾರೆ.
ರಾಜ್ಕೋಟ್ನ ರಾಜಕುಮಾರ್ ಮಾಂಧಾತ ಸಿಂಗ್ ಜಡೇಜಾ ಹಾಗೂ ಅವರ ಸಹೋದರಿ ಅಂಬಾಲಿಕಾ ದೇವಿ ನಡುವೆ ನಡೆಯುತ್ತಿರುವ ಜಟಾಪಟಿ ಇದು. 1500 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದಂತೆ ಅಣ್ಣ ತನಗೆ ಮೋಸ ಮಾಡಿದ್ದಾನೆ ಎನ್ನುವುದು ರಾಜಕುವರಿಯ ಆರೋಪ. ಅಣ್ಣ ತನ್ನನ್ನು ಕತ್ತಲೆಯಲ್ಲಿಟ್ಟು ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾನೆ. ತನಗೆ ಅಪ್ಪನ ಆಸ್ತಿಯಲ್ಲಿ ಏನೂ ಬೇಡ ಎಂಬ ಅರ್ಥ ಬರುವಂಥ ದಾಖಲೆ ಸೃಷ್ಟಿ ಮಾಡಿ ಅದಕ್ಕೆ ಸಹಿ ಹಾಕಿಸಿಕೊಂಡಿರುವುದಾಗಿ ಅಂಬಾಲಕಾ ಆರೋಪಿಸಿದ್ದಾರೆ.
ಸದ್ಯ ಈ ವಿವಾದ ಉಪವಿಭಾಗದ ನ್ಯಾಯಾಲಯದಲ್ಲಿ ತೀರ್ಮಾನ ಆಗಿದ್ದು, ಅಂಬಾಲಿಕಾ ಪರವಾಗಿ ಆದೇಶ ಹೊರಬಿದ್ದಿದೆ. ಆದರೆ ಇದನ್ನು ಪ್ರಶ್ನೆ ಮಾಡಿ ಉನ್ನತ ಕೋರ್ಟ್‌ಗೆ ಹೋಗುವ ವಿಚಾರದಲ್ಲಿದ್ದಾರೆ ರಾಜಕುಮಾರ. ಸದ್ಯ ಉಪವಿಭಾಗದ ಕೋರ್ಟ್ ನೀಡಿರುವ ಆದೇಶದ ಅನ್ವಯ ಕುಟುಂಬದಲ್ಲಿನ 1500 ಕೋಟಿಗಳ ಚರ ಮತ್ತು ಸ್ಥಿರ ಆಸ್ತಿ ವಿಭಜನೆಯಾಗಬೇಕಿದೆ.
ನಿಯಮದ ಪ್ರಕಾರ ಇದನ್ನು ಉನ್ನತ ಕೋರ್ಟ್‌ನಲ್ಲಿ ಪ್ರಶ್ನಿಸಲು 60 ದಿನಗಳ ಅವಕಾಶವಿದ್ದು, ಅದನ್ನು ಸಲ್ಲಿಸಲಾಗುವುದು ಎಂದು ರಾಜ ಕುಟುಂಬದ ಕಾನೂನು ಸಲಹೆಗಾರ ತಿಳಿಸಿದ್ದಾರೆ. ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ.
ಏನಿದು ವಿವಾದ?
ಗುಜರಾತಿನ ಮಾಜಿ ಹಣಕಾಸು ಸಚಿವ ಮತ್ತು ಮಾಜಿ ರಾಜಕೋಟ್ ರಾಜಕುಮಾರ ಮನೋಹರ್ ಜಡೇಜಾ ಅವರು ಮೃತಪಟ್ಟ ನಂತರ ಈ ವಿವಾದ ನಡೆದಿದೆ. ರಾಜ ಮಾಂಧಾತ ಸಿಂಗ್ ತನ್ನ ಸಹೋದರನ ಆಸೆಯಂತೆ ತನ್ನ ಸಹೋದರಿ ಅಂಬಾಲಿಕಾ ದೇವಿಗೆ 1.5 ಕೋಟಿ ರೂಪಾಯಿಗಳನ್ನು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ತಮಗೆ ಆ ಆಸ್ತಿ ಬಂದಿಲ್ಲ ಎನ್ನುವುದು ಅಂಬಾಲಿಕಾ ದೇವಿ ಆರೋಪ. ಆದ್ದರಿಂದ ಸಹೋದರ ಸೇರಿದಂತೆ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.