

ರಾಯಚೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ರಾಯಚೂರಿನಲ್ಲಿ ನಡೆದಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿ ಶಿಕ್ಷಿಸಬೇಕಾಗಿರುವ ಅಧಿಕಾರಿಗಳೇ ಮದ್ಯದ ಕಳ್ಳವ್ಯವಹಾರದಲ್ಲಿ ಸಿಕ್ಕಿಬಿದ್ದಿದ್ದಾರೆ.
ರಾಯಚೂರಿನ ರಾಜ್ಯ ಪಾನೀಯ ನಿಗಮ ನಿಯಮಿತ ಗೋದಾಮಿನಿಂದಲೇ ಕಳ್ಳವ್ಯವಹಾರ ನಡೆದಿರುವುದು ಬೆಳಕಿದೆ ಬಂದಿದೆ. ಅಬಕಾರಿ ಇನ್ಸ್ಪೆಕ್ಟರ್ ಮೋನಪ್ಪ ಹಾಗೂ ಗೋದಾಮಿನ ವ್ಯವಸ್ಥಾಪಕ ಶಿವಪ್ಪರಿಂದ ಅಕ್ರಮ ದಂಧೆ ನಡೆಸಿರುವ ಆರೋಪ ಹೊತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಲಾಕ್ ಡೌನ್ ನಿಯಮ ಮೀರಿ ತಡರಾತ್ರಿವರೆಗೆ ಮದ್ಯ ಹಂಚಿಕೆ ಮಾರಾಟ ಮಾಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ರಾತ್ರಿ ವೇಳೆ ಗೋದಾಮಿನ ಮೇಲೆ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ದಾಳಿ ಮಾಡಿದ್ದಾರೆ. ಅಬಕಾರಿ ಇನ್ಸ್ಪೆಕ್ಟರ್ ಮೊನಪ್ಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಜತೆಗೆ, ಅಕ್ರಮ ಮದ್ಯ ಸಾಗಿಸುತ್ತಿದ್ದ ಎರಡು ವಾಹನ, 5 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ.
ರಾಯಚೂರಿನ ಎಪಿಎಂಸಿ ಆವರಣದಲ್ಲಿರುವ ಕೆ.ಎಸ್.ಬಿ.ಸಿಎಲ್ ಡಿಪೋ ಗೋದಾಮಿನಿಂದ ಈ ಕೃತ್ಯ ನಡೆದಿದೆ. ಅಚ್ಚರಿ ಎಂದರೆ, ಕಳೆದ ವರ್ಷ ಲಾಕ್ಡೌನ್ನಲ್ಲಿಯೂ ಕರ್ತವ್ಯ ಲೋಪವೆಸಗಿ ಅಮಾನತಾಗಿದ್ದ ಅಬಕಾರಿ ನಿರೀಕ್ಷಕ ಮೋನಪ್ಪ, ಕಳ್ಳ ವ್ಯವಹಾರದಲ್ಲಿ ಸಿಕ್ಕಿಬಿದ್ದರೂ ಅಧಿಕಾರದಲ್ಲಿ ಮುಂದುವರಿಯುತ್ತಿರುವುದಾಗಿ ಆರೋಪಿಸಲಾಗಿದೆ.