ಇ.ಡಿಯಲ್ಲಿ 50 ಗಂಟೆ: ನನ್ನ ನೋಡಿ ಅಧಿಕಾರಿಗಳೇ ಬೆರಗಾದ್ರು, ಒಳಗೆ ಹೇಗಿತ್ತು ಗೊತ್ತಾ ಎಂದು ಬಣ್ಣಿಸಿದ ರಾಹುಲ್

Rahul
Published on: 

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಜಾರಿ ನಿರ್ದೇಶನಾಲಯ (ಇಡಿ) ಸಂಸದ ರಾಹುಲ್ ಗಾಂಧಿ ಅವರನ್ನು ಆರು ದಿನಗಳವರೆಗೆ 50 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದೆ.

ಈ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಏನಾಯಿತು? ಇಷ್ಟು ಸುದೀರ್ಘ ಅವಧಿಯಲ್ಲಿ ತೊಂದರೆ ಆಗಲಿಲ್ಲವಾ? ಹೇಗೆಲ್ಲಾ ನಿಭಾಯಿಸಿದರೆ ಎಂದು ಕೇಳಿರುವ ಪ್ರಶ್ನೆಗೆ ರಾಹುಲ್​ ಗಾಂಧಿ ಉತ್ತರಿಸಿದ್ದು ಹೀಗೆ...

'ಜಾರಿ ನಿರ್ದೇಶನಾಲಯದ ಸುದೀರ್ಘ ವಿಚಾರಣೆ ಎದುರಿಸಲು ನನಗೆ ಬಹಳ ಕಷ್ಟವಾಗಿರಬಹುದು ಎಂದು ಬಹುತೇಕ ಎಲ್ಲರೂ ಯೋಚಿಸುತ್ತಿದ್ದೀರಿ. ಅದರೆ ಇದು ತಪ್ಪು. ನನಗೆ ಸ್ವಲ್ಪವೂ ಕಷ್ಟವಾಗಲಿಲ್ಲ. ಏಕೆಂದರೆ ವಿಚಾರಣಾಧಿಕಾರಿಗಳ ಎದುರು ನಾನು ಒಬ್ಬನೇ ಕುಳಿತುಕೊಂಡಿರಲಿಲ್ಲ. ಬದಲಿಗೆ ಕಾಂಗ್ರೆಸ್‌ನ ಕೆಲವು ಮುಖಂಡರೂ ಇದ್ದರು. ನನಗೆ ಏನೂ ಭಯವಾಗಲಿಲ್ಲ.

'ಅಷ್ಟಕ್ಕೂ ನನಗೆ ಏಕೆ ಭಯವಾಗಬೇಕು? ನಾನು ಸತ್ಯದ ಪರವಾಗಿ ಇದ್ದೇನೆ. ಐದು ದಿನಗಳಲ್ಲಿಯೇ 50 ಗಂಟೆಗೂ ಹೆಚ್ಚು ಸಮಯ ವಿಚಾರಣೆಗೆ ಒಳಪಡಿಸಲಾಗಿದೆ. ಚಿಕ್ಕದಾಗಿರುವ ಕತ್ತಲೆ ಕೋಣೆಯಲ್ಲಿ ನನ್ನನ್ನು ಕೂರಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲಿ ಮೂವರು ಇ.ಡಿ ಅಧಿಕಾರಿಗಳು ಇದ್ದಾರೆ. ಅವರು ಸೂಚನೆಗಳನ್ನು ಪಡೆದುಕೊಳ್ಳಲು ಆಗಾಗ್ಗೆ ಕೊಠಡಿಯಿಂದ ಹೊರಗೆ ಹೋಗುತ್ತಿದ್ದರು. ನಾನು ಮಾತ್ರ ಒಳಗಡೆಯೇ ಇರುತ್ತಿದ್ದೇನೆ. ನನಗೆ ತುಂಬಾ ತಾಳ್ಮೆ ಇದೆ. ಆದ್ದರಿಂದ ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರ ನೀಡುತ್ತಿದ್ದೇನೆ.

'ನನ್ನ ಈ ಪರಿಯ ತಾಳ್ಮೆ ಹಾಗೂ ಸಮಾಧಾನದಿಂದ ಉತ್ತರ ಕೊಡುವುದನ್ನು ನೋಡಿ ತನಿಖೆ ಮಾಡುತ್ತಿರುವ ಅಧಿಕಾರಿಗಳೇ ಅಚ್ಚರಿಗೆ ಒಳಗಾಗಿದ್ದಾರೆ. ನಾನು ಇಷ್ಟು ಶಾಂತವಾಗಿ ಇರಲು ಹೇಗೆ ಸಾಧ್ಯ ಎಂದು ಅವರು ಕೇಳಿದರು. ನಾನು ಅವರಿಗೆ ಸತ್ಯ ಹೇಳಲಿಲ್ಲ, ಏನೋ ಒಂದು ಕಾರಣ ಹೇಳಿದೆ. ನಿಜವಾಗಿಯೂ ಹೇಳಬೇಕು ಎಂದರೆ ನಾನು ವಿಪಾಸನಾ ಮಾಡುವ ಅಭ್ಯಾಸ ಹೊಂದಿದ್ದೇನೆ. ಆದ್ದರಿಂದ ಸುದೀರ್ಘ ಸಮಯ ಸುಲಭವಾಗಿ ಕೂರಬಲ್ಲೆ.

'ಯಾವುದೇ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಅಥವಾ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ವಿಚಾರಣಾಧಿಕಾರಿಗಳು ಅರಿತುಕೊಂಡಂತೆ ತೋರುತ್ತಿದೆ. ನಾನು ಅದನ್ನು ಅವರಿಗೆ ತೋರಿಸಿಕೊಟ್ಟಿದ್ದೇನೆ. ನಾವು ಸತ್ಯದ ಪರವಾಗಿ ಇದ್ದೇವೆ. ವಿಚಾರಣೆಗೆ ಒಳಪಡಿಸಿದ ಅಷ್ಟೂ ದಿನವೂ ನನ್ನನ್ನು ಅಧಿಕಾರಿಗಳು ಪ್ರಶಂಸಿಸಿದ್ದಾರೆ' ಎಂದು ರಾಹುಲ್​ ಗಾಂಧಿ ತಮ್ಮ ಬೆನ್ನನ್ನು ತಟ್ಟಿಕೊಂಡಿದ್ದಾರೆ. ಇಂಥ ವಿಚಾರಣೆಗಳನ್ನು ನಾನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)