ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ರದ್ದು ಎಂದು ಹರಿದಾಡ್ತಿರೋ ಸುದ್ದಿ ನಿಜನಾ? ಸಚಿವರು ಏನು ಹೇಳಿದ್ದಾರೆ ನೋಡಿ..

suresh kumar
Published on

ಬೆಂಗಳೂರು: ಇದೇ ತಿಂಗಳು ನಡೆಯಬೇಕಿದ್ದ ಪಿಯುಸಿ ಹಾಗೂ ಮುಂದಿನ ತಿಂಗಳು 21ರಿಂದ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕರೊನಾ ಕಾರಣದಿಂದಾಗಿ ರಾಜ್ಯ ಸರ್ಕಾರ ಇದಾಗಲೇ ಮುಂದೂಡಿ ಆದೇಶಿಸಿದೆ.

ಆದರೆ ಇದರ ನಡುವೆಯೇ ಈ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವಾರು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೂ ಹಲವಾರು ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಅದೇನೆಂದರೆ, ಕೋವಿಡ್ ತೀವ್ರ‌ ಪ್ರಸರಣದ‌ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ-ದ್ವಿತೀಯ ಪಿಯು‌ ಪರೀಕ್ಷೆಗಳನ್ನು ಮುಂದೂಡಲಾಗಿದೆಯೇ ಹೊರತು ರದ್ದು ‌ಪಡಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಈಗ ಹರಿದಾಡುತ್ತಿರುವ ಸುದ್ದಿಗಳಲ್ಲಿ ಯಾವುದೇ ಹುರುಳು ಇಲ್ಲ. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಯೋಗಕ್ಷೇಮವನ್ನು ಗಮನದಲ್ಲಿರಿಸಿ ಮುಂದಿನ ದಿನಗಳಲ್ಲಿ ಅವರ ಒಳಿತಿಗೆ ಪೂರಕವಾದ ನಿರ್ಣಯ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ವಿಚಲಿತರಾಗದೇ‌ ವಿದ್ಯಾರ್ಥಿಗಳು‌ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net