ಇಂದಿನಿಂದ ಪಿಯು ಕಾಲೇಜು ಶುರು: ಸಮವಸ್ತ್ರ ಕಡ್ಡಾಯ- ಹಿಜಾಬ್‌ ಗಲಾಟೆಗೆ ಅವಕಾಶವಿಲ್ಲ

students
Published on

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ (ಜೂನ‌ 9) ಪಿಯುಸಿ ತರಗತಿಗಳು ಆರಂಭವಾಗಲಿವೆ. ಸರ್ಕಾರದ ನಿಯಮ, ಹೈಕೋರ್ಟ್‌ ಆದೇಶಗಳ ಹೊರತಾಗಿಯೂ ತರಗತಿಗಳಲ್ಲಿ ಹಿಜಾಬ್‌ ಧರಿಸಿ ಗಲಾಟೆ ಮಾಡುತ್ತಿರುವವರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ರಾಜ್ಯ ಶಿಕ್ಷಣ ಇಲಾಖೆ ಸಮವಸ್ತ್ರ ಧರಿಸುವಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಆಗಮಿಸಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಿದೆ.


ಕಾಲೇಜಿನ ಅಭಿವೃದ್ಧಿ ಸಮಿತಿ ಸೂಚಿಸಿದ ಸಮವಸ್ತ್ರವನ್ನೇ ಧರಿಸಬೇಕು. ಒಂದು ವೇಳೆ ಕಾಲೇಜು ಅಭಿವೃದ್ಧಿ ಮಂಡಳಿ ಅಥವಾ ಆಡಳಿತ ವರ್ಗ ಸಮವಸ್ತ್ರ ಕಡ್ಡಾಯಗೊಳಿಸದಿದ್ದರೆ ವಿದ್ಯಾರ್ಥಿಗಳು ಸಮಾನತೆ ಮತ್ತು ಏಕತೆ ಕಾಪಾಡುವಂತಹ ಉಡುಪು ಧರಿಸಬೇಕು. ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಬಟ್ಟೆ ಧರಿಸಲು ಅವಕಾಶವಿಲ್ಲ ಎಂದು ಇದಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯು ಕಾಲೇಜು ಆಡಳಿತ ಮಂಡಳಿಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

ಹಿಜಾಬ್ ವಿವಾದದ ಕುರಿತ ವಿಚಾರಣೆ ಸುಪ್ರಿಂ ಕೋರ್ಟ್​ನಲ್ಲಿ ಬಾಕಿಯಿದ್ದು, ರಾಜ್ಯ ಸರ್ಕಾರವು ಹೈಕೋರ್ಟ್ ತೀರ್ಪಿನ ಪ್ರಕಾರ ಹಿಜಾಬ್​ನಂತಹ ಉಡುಪು ಧರಿಸಲು ಅವಕಾಶ ನೀಡದೇ, ಸಮವಸ್ತ್ರ ಧಾರಣೆ ಕಡ್ಡಾಯಗೊಳಿಸಿ ಮಾರ್ಗಸೂಚಿ ರೂಪಿಸಿದೆ.ಇನ್ನು ಪಿಯು ಕಾಲೇಜುಗಳಿಗೆ ಶೈಕ್ಷಣಿಕ ವೇಳಾಪಟ್ಟಿಯನ್ನ ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿಪಡಿಸಿದೆ.

ಜೂನ್ 9 ರಿಂದ ಸೆಪ್ಟೆಂಬರ್ 30 ರವರೆಗೆ ಕಾಲೇಜು ಕಾರ್ಯನಿರ್ವಹಿಸಲಿದೆ. ಅಕ್ಟೋಬರ್ 1 ರಿಂದ 12 ರವರೆಗೆ ಮಧ್ಯಂತರ ರಜೆ ಘೋಷಿಸಲಾಗಿದೆ. ಅಕ್ಟೋಬರ್ 13 ರಿಂದ ಮಾರ್ಚ್ 31 ರವರೆಗೆ ಶೈಕ್ಷಣಿಕ ವರ್ಷದ ಎರಡನೇ ಅವಧಿ. ಏಪ್ರಿಲ್ ಒಂದರಿಂದ ಬೇಸಿಗೆ ರಜೆ ಎಂದು ಸದ್ಯ ನೀಡಿರುವ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net