PSI ನೇಮಕಾತಿ ಹಗರಣ: ಪೌಲ್​ ಹರಕೆಯ ಕುರಿ- ಕಿಂಗ್​ಪಿನ್​ ಮಾಜಿ ಸಿಎಂ ಪುತ್ರ ಯಾರು? ದಿನೇಶ್​ ಗುಂಡೂರಾವ್​ ಟ್ವೀಟ್

PSI
Published on

ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ. ಇದಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಈ ನಡುವೆಯೇ, ಮಾಜಿ ಸಿಎಂ ಓರ್ವರ ಪುತ್ರನ ಕೈವಾಡ ಈ ನೇಮಕಾತಿಯಲ್ಲಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿರುವುದು ಇನ್ನಷ್ಟು ಹಂಗಾಮಾ ಸೃಷ್ಟಿಸಿದೆ. ಇತ್ತೀಚೆಗೆ ಮಾತನಾಡಿದ್ದ ಯತ್ನಾಳ್​, 'ಪಿಎಸ್ಐ ನೇಮಕಾತಿ ಅಕ್ರಮವನ್ನು ಸಿಬಿಐಗೆ ವಹಿಸಬೇಕು. ಸಿಬಿಐ ತನಿಖೆಗೆ ವಹಿಸಿದರೆ ಕಳ್ಳರು ಹೊರಗೆ ಬರುತ್ತಾರೆ. ಇದರಲ್ಲಿ ಮಾಜಿ ಸಿಎಂ ಪುತ್ರನ ಕೈವಾಡ ಇದೆ. ಮಾಜಿ ಸಿಎಂ ಪುತ್ರ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನನ್ನು 10 ಬಾರಿ ಕೇಳಿದ್ದಾರೆ. ಆದರೆ ನಾನು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲ ಸತ್ಯ ಹೊರ ಬರಲಿದೆ ಎಂದು ತಿಳಿಸಿದ್ದೇ ನೆ. ಈ ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ ಎಲ್ಲರೂ ಇದ್ದಾರೆ. ಪಿಎಸ್ಐ ಹುದ್ದೆಗಾಗಿ 70ರಿಂದ 80 ಲಕ್ಷ ರೂ. ಕೊಟ್ಟಿದ್ದಾರೆ' ಎಂದಿದ್ದರು.

ತಮ್ಮ ಮಾತಿನಲ್ಲಿ ಬಿಜೆಪಿಯನ್ನೂ ಸೇರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರಿಗೆ ಆರೋಪಿಸಲು ಒಂದು ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ ಮುಂದುಮಾಡಿಕೊಂಡು ಈಗ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು: 'ಪೊಲೀಸ್ ನೇಮಕಾತಿ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಯತ್ನಾಳ್ ಆರೋಪ ಗಮನಿಸಿದರೆ ಈ ಹಗರಣದಲ್ಲಿ ಬಂಧಿತರಾಗಿರುವ ಅಮೃತ್ ಪೌಲ್ ಹರಕೆಯ ಕುರಿಯಂತೆ ಭಾಸವಾಗುತ್ತಿದೆ. ಈ ಹಗರಣದ ನಿಜವಾದ ಕಿಂಗ್‍ಪಿನ್ ಮಾಜಿ ಮುಖ್ಯಮಂತ್ರಿಯ ಮಗ. ಹಾಗಾದರೆ ಅದು ಯಾರು ಎಂಬುದೇ ಯಕ್ಷಪ್ರಶ್ನೆ. ಈ ಸತ್ಯ ಜನರಿಗೆ ಗೊತ್ತಾಗಬೇಕು. ಆ ಸತ್ಯ ತಿಳಿಯಬೇಕಾದರೆ ಒಂದೋ ನ್ಯಾಯಾಂಗ ತನಿಖೆಯಾಗಬೇಕು, ಇಲ್ಲವೆ ಸಿಬಿಐ ' ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

'ಈ ಹಗರಣದ ತನಿಖೆಯನ್ನು ಈಗಾಗಲೇ ಸಿಐಡಿ ನಡೆಸುತ್ತಿದೆ. ಯತ್ನಾಳ್‍ರ ಈ ಆರೋಪ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಈ ಆರೋಪ ಮಾಡಿದ್ದಾರೆ. ಆದರೂ ಸಿಐಡಿ ಅಧಿಕಾರಿಗಳು ಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ' ಎಂದು ದಿನೇಶ್​ ಗುಂಡೂರಾವ್​ ಪ್ರಶ್ನಿಸಿದ್ದಾರೆ.

ಕಳೆದ ಅಧಿವೇಶನದಲ್ಲಿ ಪಿಎಸ್‍ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಾವು ಒತ್ತಾಯಿಸಿದ್ದೆವು. ಆದರೆ ಯತ್ನಾಳ್ ಈ ಹಗರಣದ ಕಿಂಗ್‍ಪಿನ್ ಎಕ್ಸ್ ಸಿಎಂ ಪುತ್ರ ಎಂದಿದ್ದಾರೆ. ಜತೆಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಮ್ಮ ಒತ್ತಾಯಕ್ಕಂತೂ ಈ ಸರ್ಕಾರ ಒಪ್ಪಲಿಲ್ಲ. ಕೊನೆಯ ಪಕ್ಷ ಯತ್ನಾಳ್ ಒತ್ತಾಯಕ್ಕಾದರೂ ಬೆಲೆ ಕೊಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಪಿಎಸ್‍ಐ ಹಗರಣ ಈ ಸರ್ಕಾರದ ಅತಿ ದೊಡ್ಡ ಕಳಂಕ. ಸಿಐಡಿ ಮೂಲಕ ಕಾಟಾಚಾರದ ತನಿಖೆ ಮಾಡಿಸಿ ತನ್ನ ಮೇಲಿರುವ ಕಳಂಕ ತೊಳೆದುಕೊಳ್ಳಲು ಈ ಸರ್ಕಾರ ಯತ್ನಿಸುತ್ತಿದೆ. ಆದರೆ ಈ ಸರ್ಕಾರದ ಭಾಗವಾಗಿರುವವರೇ ಈ ಹಗರಣದಲ್ಲಿ ಪ್ರಭಾವಿಗಳ ಭಾಗಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರ ಪ್ರಾಮಾಣಿಕವಾಗಿದ್ದರೆ ಈಗಲಾದರೂ ಪಾರದರ್ಶಕ ತನಿಖೆ ನಡೆಸಲಿ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net