

ಮೈಸೂರು: ಪಿಎಸ್ಐ ನೇಮಕಾತಿಗೆ ಕುರಿತು ನಡೆದ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಹೊತ್ತ ಮೈಸೂರಿನ ಎನ್.ಆರ್.ಸಂಚಾರ ವಿಭಾಗದ ಇನ್ಸ್ಪೆಕ್ಟರ್ ಅಶ್ವಿನಿ ಅನಂತಪೂರ ಅವರನ್ನು ಅಮಾನತು ಮಾಡಲಾಗಿದೆ.
ಇಲಾಖಾ ತನಿಖೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಎಫ್‌ಡಿಎ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಆಡಿಯೋ, ವಾಟ್ಸ್ಆ್ಯಪ್ ಸಂದೇಹ ಮತ್ತು ಹಣ ವರ್ಗಾವಣೆ ದಾಖಲೆಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಆರೋಪ ಮಾಡಿದ್ದರು. ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ಮಾಡಿದ್ದಾರೆ ಎಂದು ಲಕ್ಷ್ಮಣ್ ದಾಖಲೆಗಳ ಸಮೇತ ಆರೋಪ ಮಾಡಿದ್ದರು.
ಬಾಗಲಕೋಟೆಯ ಸಂಗಮೇಶ್ ಝಳಕಿ ಜತೆ ಹಣದ ವ್ಯವಹಾರದ ಬಗ್ಗೆ ಸಂಭಾಷಣೆ ನಡೆಸಿರೊ ಆಡಿಯೋ ಹಾಗೂ ಇತರ ದಾಖಲೆಗಳನ್ನು ಲಕ್ಷ್ಮಣ್ ಬಹಿರಂಗಗೊಳಿಸಿದ್ದರು. ಪ್ರಕರಣವನ್ನು ಪರಿಗಣಿಸಿದ ನಗರ ಪೊಲೀಸ್ ಆಯುಕ್ತರು ವಿಚಾರಣೆ ಬಾಕಿ ಇರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)