ಕಳೆದ ವರ್ಷದ ಇದೇ ಸಮಯ ನೆನೆದು ದುಃಖಿಸಿದ ಪ್ರಣಬ್‌ ಮುಖರ್ಜಿ ಪುತ್ರಿ

pranav mukharji
Published on

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಲೇ ಇರುವ ಹಿನ್ನೆಲೆಯಲ್ಲಿ ಅವರನ್ನು ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ, ಚಿಂತಾಜನಕ ಪರಿಸ್ಥಿತಿ ಮುಂದುವರಿದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ತೀವ್ರವಾಗಿ ನೊಂದುಕೊಂಡಿರುವ ಅವರ ಮಗಳು ಶರ್ಮಿಸ್ತಾ ಮುಖರ್ಜಿ ಟ್ವಿಟರ್‌ ಖಾತೆಯಲ್ಲಿ ಅಪ್ಪನ ಕುರಿತಾಗಿ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ ಅಗಸ್ಟ್ 8ರಂದು ತಂದೆಯವರಿಗೆ ಭಾರತ ರತ್ನ ಗೌರವ ನೀಡಲಾಗಿತ್ತು. ಇದು ಜೀವನ ಅತ್ಯಂತ ಖುಷಿಯ ಕ್ಷಣವಾಗಿತ್ತು. ಇದಾಗಿ ಸರಿಯಾಗಿ ಒಂದು ವರ್ಷಕ್ಕೆ ಅಗಸ್ಟ್ 10ರಿಂದ ಅವರ ಆರೋಗ್ಯ ಗಂಭೀರವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.

"ಆವರ ಜೀವವನಕ್ಕೆ ಈ ಸಮಯದಲ್ಲಿ ಏನು ಒಳ್ಳೆಯದು ಎನಿಸುತ್ತದೆಯೋ ಅದನ್ನು ದಯಪಾಲಿಸು ಏವರೆ, ನನಗೆ ಸಂತೋಷ ಮತ್ತು ದುಃಖ ಏನೇ ಆದರೂ ಅದನ್ನು ಭರಿಸುವ ಶಕ್ತಿ ಕೊಡು’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಪ್ರಣಬ್ ಮುಖರ್ಜಿ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಚಿಕಿತ್ಸೆ ಪೂರಕವಾದ ಸ್ಪಂದನೆ ಪೂರ್ಣ ಪ್ರಮಾಣದಲ್ಲಿ ದೊರಕುತ್ತಿಲ್ಲ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಆಸ್ಪತ್ರೆಯ ಹೆಲ್ತ್‌ ಬುಲೆಟಿನ್‌ನಲ್ಲಿ ವಿವರಿಸಲಾಗಿದೆ.

ಪ್ರಣಬ್ ಮುಖರ್ಜಿ ಅವರಿಗೆ ಕರೊನಾ ‌ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಮೆದುಳು ಸಂಬಂಧಿಸಿದ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಬಂದ ಹಿನ್ನೆಲೆ ಆಪರೇಷನ್ ಕೂಡಾ ಮಾಡಲಾಗಿದ್ದು ಸದ್ಯ ಆರೋಗ್ಯ ತೀವ್ರ ಗಂಭೀರ ಪರಿಸ್ಥಿತಿಯಲ್ಲಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net