

ಮೈಸೂರು: ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಸದ್ಯಕ್ಕೆ ರಾಜಕೀಯಕ್ಕೆ ನೋ ಎಂಟ್ರಿ ಎಂದು ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಲ್ಲಿಯವರೆಗೆ ಹೇಳುತ್ತಲೇ ಬಂದಿದ್ದಾರೆ.
ಕಳೆದ ವರ್ಷ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿಯೂ ಯದುವೀರ್ ಇದೇ ಮಾತನ್ನು ಹೇಳಿದ್ದು. ಯದುವೀರ್, ರಾಜಕೀಯ ಪ್ರವೇಶ ಮಾಡುತ್ತಾರಾ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋ... ಸದ್ಯ ಆ ಬಗ್ಗೆ ಏನನ್ನೂ ಚಿಂತನೆ ಮಾಡಿಲ್ಲ. ರಾಜಕೀಯಕ್ಕೆ ನೋ ಎಂಟ್ರಿ ಎಂದು ನಗುತ್ತಲೇ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹಬ್ಬಿರುವ ವಿಷಯಕ್ಕೆ ಅಂತ್ಯ ಹಾಡಿದ್ದರು.
ಆದರೆ ಇದೀಗ ಅವರು, ರಾಜಕೀಯದತ್ತ ಒಲವು ತೋರಿದಂತೆ ಕಾಣಿಸುತ್ತಿದೆ. ರಾಜಕೀಯ ಪ್ರವೇಶದ ಬಗ್ಗೆ ಚಿಂತನೆ ನಡೆಸಿರುವುದು ತಿಳಿದುಬಂದಿದೆ. ಇದಕ್ಕೆ ಸಾಕ್ಷಿಯಾಗಿದೆ ಅವರ ಒಂದೇ ವಾಕ್ಯದ ಟ್ವೀಟ್.
ತಮ್ಮ ಟ್ವೀಟ್‌ನಲ್ಲಿ ಯದುವೀರ್ ಅವರು ‘Should I join Politics?’ (ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೆ?) ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಆಯ್ಕೆಯನ್ನು ಜನರಿಗೆ ಬಿಟ್ಟಿದ್ದಾರೆ. ತಾವು ರಾಜಕೀಯಕ್ಕೆ ಬರಬೇಕೋ, ಬೇಡವೋ ಎಂದು ಸಾರ್ವಜನಿಕರು ಏನು ಹೇಳುತ್ತಾರೆ, ಅವರ ಅಭಿಪ್ರಾಯ ಏನು ಎಂಬುದನ್ನು ಇವರು ಬಯಸಿದ್ದಾರೆ.
ಅದಕ್ಕೆ ಬೇಡ ರಾಜಕೀಯ ತುಂಬಾ ಹೊಲಸು, ಅದರಲ್ಲಿ ಪ್ರವೇಶ ಮಾಡಬೇಡಿ ಎಂದೇ ಕಮೆಂಟಿಗರು ಹೇಳಿದ್ದಾರೆ. ‘ರಾಜಕೀಯ ಪಕ್ಷಕ್ಕೆ ಸೇರಿಕೊಂಡರೆ, ಕೆಲವೊಮ್ಮೆ ಆ ಪಕ್ಷವು ತಪ್ಪು ಮಾಡಿದಾಗ ಅದರ ವಿರುದ್ಧ ಮಾತನಾಡಲು ಸ್ವತಂತ್ರ ಇರುವುದಿಲ್ಲ ಮತ್ತು ಆ ಪಕ್ಷದ ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಆ ವ್ಯಕ್ತಿ ಮಾಡಿದ್ದು ತಪ್ಪು ಎಂಬ ಅರಿವಿದ್ದು ಅವರ ಪರ ವಹಿಸಿಕೊಂಡು ಮಾತನಾಡಬೇಕಾಗುತ್ತದೆ. ಮೇಲಾಗಿ ನಿಮ್ಮಂಥವರು ಒಬ್ಬ ಪಕ್ಷದ ಕಡೆಯವರು ಎಂದು ಎನಿಸಿಕೊಳ್ಳುದುವದಕ್ಕಿಂತ ನೀವು ನೀವಾಗಿ ಅದರಲ್ಲಿಯೂ ಮೈಸೂರು ಸಂಸ್ಥಾನದ ಗುರುತಾಗಿರುವುದು ಶ್ರೇಷ್ಠ ಎಂಬುದು ನನ್ನ ಅನಿಸಿಕೆ’ ಎಂದು ಬಸವರಾಜ್ ಎನ್ನುವವರು ಹೇಳಿದ್ದರೆ, ‘ಬೇಡ ಸರ್, ನಿಮ್ಮ ಪರಿವಾರವನ್ನು ದೇವರಂತೆ ಕಾಣುತ್ತಿದ್ದಾರೆ, ಅದನ್ನೇ ಕಾಪಾಡಿಕೊಳ್ಳಿ.. ರಾಜಕೀಯ ತುಂಬಾ ಹೊಲಸು ಎಂದು ಸಂತೋಷ್ ಎನ್ನುವವರು ಹೇಳಿದ್ದಾರೆ.
ಸನಾತದ ಧರ್ಮಾದಿಷ್ಠಿತ, ನೈತಿಕತೆಯ, ವಿಶಾಲ, ಸಾತ್ವಿಕ, ದೂರದೃಷ್ಟಿಯ ಅಡಳಿತ ನೀಡಿದ ಮೈಸೂರು ಸಂಸ್ಥಾನದ ಕುಡಿ ನೀವು. ಅಧರ್ಮಿ, ಭ್ರಷ್ಟ, ಸ್ವಾರ್ಥದಿಂದ ಕೂಡಿದ ಜಾತ್ಯಾತೀತ ವ್ಯವಸ್ಥೆಯಲ್ಲಿ ನಿಮ್ಮ ಪೂರ್ವಜರು ನೀಡಿದ ಆದರ್ಶ ಆಡಳಿತವನ್ನು ನೀಡಲು ಅಸಾಧ್ಯ ಎಂದಿರುವ ಮೋಹನ ಗೌಡ ಎನ್ನುವವರು ರಾಜಕೀಯಕ್ಕೆ ಬರಬೇಡಿ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಬಹುತೇಕ ಎಲ್ಲಾ ಕಮೆಂಟಿಗರೂ ರಾಜಕೀಯಕ್ಕೆ ಬರಬೇಡಿ ಎಂದು ಸಲಹೆ ಮಾಡಿದ್ದರೆ, ಒಬ್ಬರು ಇದು ಫೇಕ್ ಅಕೌಂಟ್, ರಿಪ್ಲೈ ಮಾಡಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.