

ನವದೆಹಲಿ: ಕರೊನಾ ಎರಡನೆಯ ಅಲೆಯ ಬಿಕ್ಕಟ್ಟಿನ ಈ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಲವಾರು ತಜ್ಞರ ಜತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿಸಿದ ಮುಂಬೈನ ಖ್ಯಾತ ವೈದ್ಯ ಡಾ.ಶಶಾಂಕ್ ಅವರು ಕರೊನಾ ಕುರಿತಂತೆ ಕೆಲವೊಂದು ಸಲಹೆ ನೀಡಿದ್ದಾರೆ. ನೋಡಿ ಕರೊನಾ ಮೂರು ಹಂತದಲ್ಲಿ ಬರುತ್ತದೆ. ತುಂಬಾ ಲಘುವಾಗಿ, ಮಧ್ಯಮವಾಗಿ ಹಾಗೂ ತೀವ್ರವಾಗಿ ಈ ಮೂರು ಹಂತಗಳು ಇದರಲ್ಲಿ ಇವೆ. ಕರೊನಾದ ಲಕ್ಷಣಗಳು ಕಾಣಿಸಿಕೊಂಡರೆ ಮೊದಲು ತಜ್ಞ ವೈದ್ಯರನ್ನು ಭೇಟಿಯಾಗಿ. ಕೊನೆಯ ಕ್ಷಣದವರೆಗೂ ಮನೆಯಲ್ಲಿಯೇ ಇದ್ದು, ಯಾವುದೇ ಚಿಕಿತ್ಸೆ ಮಾಡಿಕೊಳ್ಳದೇ ಅಂತಿಮ ಘಟ್ಟದಲ್ಲಿ ಆಸ್ಪತ್ರೆಯ ಕದ ತಟ್ಟಿದರೆ ಚಿಕಿತ್ಸೆ ಕಷ್ಟವಾಗುತ್ತದೆ ಎಂದರು.
ಯಾವ ಪ್ರಮಾಣದಲ್ಲಿ ಕರೊನಾ ಬಂದಿದೆ, ಅದು ಸೋಂಕಿತನಿಗೆ ಯಾವ ಹಂತದಲ್ಲಿ ಇದೆ ಎಂದು ವೈದ್ಯರು ಪರಿಶೀಲನೆ ಮಾಡುತ್ತಾರೆ. ಕೆಲವೊಂದು ಔಷಧಗಳು, ಮಾತ್ರೆಗಳ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತದೆ. ಆದರೆ ಅವುಗಳ ಪೈಕಿ ರೆಮ್ದೇಸೀವೀರ್ ಕೂಡ ಒಂದು. ಇದು ಉತ್ತಮ ಮಾತ್ರೆಯೇ. ಆದರೆ ಬಲು ದುಬಾರಿಯಾಗಿರುವ ಈ ಮಾತ್ರೆ ಎಲ್ಲ ಸೋಂಕಿತರಿಗೂ ಅಗತ್ಯವಿಲ್ಲ. ಅನಗತ್ಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳದೇ ದುಬಾರಿ ಮಾತ್ರೆ ತೆಗೆದುಕೊಳ್ಳುವುದರಿಂದ ಸಮಸ್ಯೆ ಹೆಚ್ಚಾಗಬಹುದು ಎಂದರು.
ಪ್ರಾಣಾಯಾಮ ಮಾಡುವುದರಿಂದ ಈ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಹೋಗಲಾಡಿಸಬಹುದು. ಸೋಂಕು ಬಂದರೆ ಧೃತಿಗೆಡಬಾರದು. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ದರದ ಔಷಧಗಳು ಲಭ್ಯವಿದ್ದು, ಅವುಗಳಿಂದಲೇ ಎಷ್ಟೋ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಮೊದಲಿಗಿಂತ ವೇಗದಲ್ಲಿ 2ನೇ ಅಲೆ ಹೆಚ್ಚುತ್ತಿದೆ. ಆದರೆ ಗುಣಮುಖ ಕೂಡ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಇದೇ ವೇಳೆ ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆ ಸೀನಿಯರ್ ನರ್ಸಿಂಗ್ ಸ್ಟಾಫ್ ಸುರೇಖಾ ಸೇರಿದಂತೆ ಕೆಲವು ತಜ್ಞರ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಕೋವಿಡ್ ಕಠಿಣ ಪರಿಸ್ಥಿತಿಯಲ್ಲಿ ಹಲವಾರು ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ, ಜನರಿಗೆ ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ. ಅವರ ಕೆಲಸಕ್ಕೆ ಧನ್ಯವಾದ ಎಂದರು.
ನಮ್ಮ ಬಳಿ ಕೋವಿಡ್ ವಿರುದ್ಧದ 2 ಲಸಿಕೆಗಳು ಲಭ್ಯವಿದೆ. ಲಸಿಕೆ ತೆಗೆದುಕೊಂಡರೂ ನಾವು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈಗಳನ್ನು ಸ್ವಚ್ಛಗೊಳಿಸುವುದು ಮುಂದುವರೆಸಬೇಕು ಎಂದರು. ಕೋವಿಡ್ ಲಸಿಕೆ ಪಡೆದ ಮೇಲೆಯೂ ಜನರಿಗೆ ಕೋವಿಡ್ ಸೋಂಕು ತಗುಲಬಹುದು. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ ಎಂದು ಇದೇ ವೇಳೆ ಡಾ. ನವೀದ್ ಹೇಳಿದರು.
ಪ್ರಧಾನಿ ಮೋದಿಯವರ ಸಂಪೂರ್ಣ ಭಾಷಣ ಇಲ್ಲಿದೆ ನೋಡಿ..