VIDEO: ಟೋಕಿಯೋದಲ್ಲಿ ಪ್ರಧಾನಿ: ಬಾಲಕನ ಮಾತಿಗೆ ಮನಸೋತು, ಇದನ್ನು ಹೇಗೆ ಕಲಿತೆ ಎಂದ ಮೋದಿ..

1280167
Published on

ಟೋಕಿಯೋ (ಜಪಾನ್): ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಜಪಾನಿನ ಟೋಕಿಯೋಗೆ 2 ದಿನಗಳ ಕಾಲ ಭೇಟಿ ನೀಡಲಿದ್ದು, ಇದಾಗಲೇ ಇಂದು ಟೋಕಿಯೋ ತಲುಪಿದ್ದಾರೆ.

ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ಕ್ವಾಟ್ ಕೂಡದ ಮಹತ್ವದ ಸಭೆ ಸೋಮವಾರ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯವರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿಯವರು ಭೇಟಿ ಕೊಟ್ಟಿದ್ದು, ಅವರಿಗೆ ಅದ್ದೂರು ಸ್ವಾಗತ ಸಿಕ್ಕಿದೆ. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ ಐದನೇ ಭೇಟಿ ಇದಾಗಿದೆ.

ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಪುಟ್ಟ ಮಕ್ಕಳು ವಿವಿಧ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾದ ಸ್ವಾಗತ ಫಲಕಗಳನ್ನು ಹಿಡಿದು ಟೋಕಿಯೋ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಜಪಾನಿ ಬಾಲಕ ವಿಜಕಿ ಭಾರತದ ತ್ರಿವರ್ಣ ಧ್ವಜದ ಪ್ಲಕಾರ್ಡ್​ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ. ಜಪಾನ್‌ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್​ ಕೊಡಬಹುದೇ? ಎಂದು ಹಿಂದಿಯಲ್ಲಿ ಕೇಳಿದ. ಬಾಲಕ ಹಿಂದಿ ಮಾತನಾಡಿದ್ದನ್ನು ಕೇಳಿ ಅಚ್ಚರಿಗೊಂಡ ಪ್ರಧಾನಿ, ಇದನ್ನು ಎಲ್ಲಿ ಕಲಿತಿರುವೆ ಎಂದು ಪ್ರಶ್ನಿಸಿದರು.

ಅದಕ್ಕೆ ಬಾಲಕ ನನಗೆ ಹೆಚ್ಚು ಹಿಂದಿ ಮಾತನಾಡಲು ಬರುವುದಿಲ್ಲ, ಆದರೆ ಅರ್ಥವಾಗುತ್ತೆ ಎಂದ. ಇದರ ವಿಡಿಯೋ ಇದೀಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಮೇ 24 ರಂದು ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ಶೃಂಗದಲ್ಲಿ ಮೋದಿ ಮಾತ್ರವಲ್ಲದೇ, ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ಆಸ್ಟ್ರೇಲಿಯಾದ ನಿಯೋಜಿತ ಆಂಥೋನಿ ಅಲ್ಬನೀಸ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net