ಟ್ವಿಟರ್​, ಇನ್​ಸ್ಟಾಗ್ರಾಂ ಡಿಪಿ ಬದಲಿಸಿದ ಪ್ರಧಾನಿ: ನೀವೂ ಇದಕ್ಕೆ ಸಾಥ್​ ನೀಡಿ ಎಂದ ಮೋದಿ

modi
Published on

ನವದೆಹಲಿ: ದೇಶದಲ್ಲಿ ಇಂದಿನಿಂದ ಹರ್​ ಘರ್​ ತಿರಂಗಾ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಮನೆಯ ಮೇಲೆ ಆಗಸ್ಟ್​ 2 ರಿಂದ 15 ರವರೆಗೆ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲಿ ಕೇಳಿಕೊಂಡಿದ್ದರು. ತಮ್ಮ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಪ್ರಧಾನಿ ಈ ಬಗ್ಗೆ ಉಲ್ಲೇಖಿಸಿ, ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತಿರಂಗಾ ಹಾಕುವಂತೆ ಹೇಳಿದ್ದರು. ‘ಆಜಾದಿ ಕಾ ಅಮೃತ್ ಮಹೋತ್ಸವ’ ಸಾಮೂಹಿಕ ಆಂದೋಲನವಾಗಿ ಬದಲಾಗುತ್ತಿದೆ ಮತ್ತು ಆಗಸ್ಟ್ 2 ರಿಂದ ಆಗಸ್ಟ್ 15 ರವರೆಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ತ್ರಿವರ್ಣ ಧ್ವಜ’ವನ್ನು ಪ್ರೊಫೈಲ್ ಚಿತ್ರವಾಗಿ ಬಳಸುವಂತೆ ಪ್ರಧಾನಿ ಕರೆ ನೀಡಿದ್ದರು.

ಇದೀಗ ಖುದ್ದು ಮೋದಿ ಅವರೇ ತಮ್ಮ ಟ್ವಿಟರ್​, ಇನ್​ಸ್ಟಾಗ್ರಾಮ್​ ಖಾತೆಯ ಡಿಪಿ ಬದಲಿಸಿದ್ದು, ತ್ರಿವರ್ಣ ಧ್ವಜದ ಡಿಪಿ ಹಾಕಿಕೊಂಡಿದ್ದಾರೆ. ಈ ಕುರಿತು ಟ್ವೀಟ್​ ಕೂಡ ಮಾಡಿದ್ದಾರೆ ಪ್ರಧಾನಿ ಮೋದಿ. "ಇಂದು ವಿಶೇಷವಾದ ದಿನ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ. ಎಲ್ಲರೂ ಈ ಸಂಭ್ರಮ ಆಚರಿಸೋಣ. ತ್ರಿವರ್ಣ ಧ್ವಜವನ್ನು ಸಾಮೂಹಿಕವಾಗಿ ಹಾರಿಸುವ ಮೂಲಕ ಸಂಭ್ರಮ ಇಮ್ಮಡಿಗೊಳಿಸೋಣ. ಸಾಮಾಜಿಕ ಜಾಲತಾಣಗಳ ಡಿಪಿಯನ್ನು ನಾನು ಬದಲಿಸಿದ್ದೇನೆ. ನೀವು ಕೂಡ ಬದಲಿಸಿ ಎಂದು ಹೇಳಿದ್ದಾರೆ.

ಆಗಸ್ಟ್​ 2 ಅನ್ನೇ ಆಯ್ಕೆ ಮಾಡಿಕೊಂಡಿರುವ ಕಾರಣ ಎಂದರೆ, ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯ ಅವರ ಜನ್ಮದಿನ ಎಂಬುದು. ಈ ನಿಮಿತ್ತ ಪ್ರಧಾನಿ ಮೋದಿ ಅವರು ಪಿಂಗಲಿ ವೆಂಕಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಮಗೆ ತ್ರಿವರ್ಣ ಧ್ವಜವನ್ನು ನೀಡಿರುವ ತಮಗೆ ನಮ್ಮ ದೇಶ ಅವರಿಗೆ ಸದಾ ಋಣಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ತ್ರಿವರ್ಣ ಧ್ವಜದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿ ಪಡೆದು, ನಾವು ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net