ಶ್ರೀಲಂಕಾದಲ್ಲಿ ಭುಗಿಲೆದ್ದ ಹಿಂಸಾಚಾರ: ತುರ್ತು ಪರಿಸ್ಥಿತಿ ಘೋಷಿಸಿದ ಹಂಗಾಮಿ ಅಧ್ಯಕ್ಷ

singhe
Published on

ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಇದೇ ಕಾರಣಕ್ಕೆ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಲೇ ಇದೆ. ಇದು ತಿಳಿಯುತ್ತಲೇ ಗೋಪ್ಯ ಸ್ಥಳಕ್ಕೆ ಹೋಗಿ ಅಡಗಿ ಕುಳಿತಿದಿದ್ದ ರಾಜಪಕ್ಸ ರಾಜೀನಾಮೆ ನೀಡಿದರೆ ಬಂಧಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಬೆಳ್ಳಂಬೆಳಗ್ಗೆ ದೇಶ ಬಿಟ್ಟು ಹಾರಿದ್ದಾರೆ. ಕುಟುಂಬ ಸಹಿತವಾಗಿ ದೇಶದ ಕಣ್ತಪ್ಪಿಸಿ ನಸುಕಿನಲ್ಲಿಯೇ ಸೇನಾ ವಿಮಾನದಲ್ಲಿ ಮಾಲ್ಡೀವ್ಸ್​​ಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

ಇದರ ಬೆನ್ನಲ್ಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ಅಧ್ಯಕ್ಷ ಗೊಟಬಾಯ ರಾಜಪಕ್ಸ ದೇಶದಿಂದ ಹೊರಗೆ ತೆರಳಿದ ಹಿನ್ನೆಲೆಯಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ವಿಧಿಸಲು ಮತ್ತು ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಹಂಗಾಮಿ ಅಧ್ಯಕ್ಷ, ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಆದೇಶ ಹೊರಡಿಸಿದ್ದಾರೆ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರನ್ನು ಬಂಧಿಸುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ.

ಅಧ್ಯಕ್ಷ ರಾಜಪಕ್ಸೆ ಪಲಾಯನದ ಸುದ್ದಿ ಹೊರಬಿದ್ದ ಕೂಡಲೇ ರಾಜಧಾನಿ ಕೊಲಂಬೋದಲ್ಲಿ ಮತ್ತೆ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸುತ್ತಿದ್ದಾರೆ. ಹಲವೆಡೆ ಕಲ್ಲುತೂರಾಟ ನಡೆಯುತ್ತಿವೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಉದ್ರಿಕ್ತರನ್ನ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್ ಮಾಡಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಆಶ್ರುವಾಯು ಶೆಲ್​​ಗಳನ್ನು ಸಿಡಿಸಿದರು. ಇದೀಗ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಪ್ರಧಾನಿ ಕಚೇರಿ ಈ ಬಗ್ಗೆ ಮಾಹಿತಿ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net