ವಿದೇಶಗಳಲ್ಲಿ ಅಕ್ರಮ ಹಣ ಕೂಡಿಟ್ಟಿದ್ದಾರಾ ಐಶ್ವರ್ಯ ರೈ? ಮಾಜಿ ವಿಶ್ವಸುಂದರಿಗೆ ಸಂಕಷ್ಟ- ಇ.ಡಿಯಿಂದ ಸಮನ್ಸ್‌ ಜಾರಿ

aishwarya
Published on

ಮುಂಬೈ: ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಪನಾಮಾ ಪೇಪರ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ನಟಿ ಐಶ್ವರ್ಯ ರೈ ಬಚ್ಚನ್‌ಗೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಇವರಿಗೆ ಸಮನ್ಸ್ ಜಾರಿ ಮಾಡಿದೆ.

ಮೊಸಾಕ್ ಫೋನ್ಸೆಕಾ ಎಂಬ ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆಯು ವಿಶ್ವದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2016ರಲ್ಲಿ ಹನ್ನೊಂದೂವರೆ ಮಿಲಿಯನ್‌ನಷ್ಟು ದಾಖಲೆ ತಯಾರಿಸಿದ್ದು, ಅದೇ ಪನಾಮ ಪೇಪರ್ಸ್ ಹಗರಣ. ವಿದೇಶಗಳಲ್ಲಿ ಅಕ್ರಮವಾಗಿ ಹೇಗೆ, ಯಾರು ಹಣ ಹೂಡಿಕೆ ಮಾಡಿದ್ದಾರೆ ಎಂಬೆಲ್ಲಾ ಮಾಹಿತಿ ಇದರಲ್ಲಿ ಇವೆ.

12 ರಾಷ್ಟ್ರೀಯ ನಾಯಕರ ಹೆಸರು ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರೂ ಇದರಲ್ಲಿ ಇವೆ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್, ಇರಾಕ್‌ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್ ರಾಷ್ಟ್ರಪತಿ ಪೆಟ್ರೋ ಪೊರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್‌ನ ಪ್ರಧಾನಿಯ ಹೆಸರುಗಳು ಇದೆ. ಭಾರತದ ಮಟ್ಟಿಗೆ ಹೇಳುವುದಾದರೆ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ಸೇರಿದಂತೆ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳಿವೆ.

ಜರ್ಮನಿಯ ಪತ್ರಿಕೆಯೊಂದು ಇದನ್ನು ಬಹಿರಂಗಗೊಳಿಸಿತ್ತು. ಆ ನಂತರ ಅಂತಾರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದಿಂದಾಗಿ ಇದು ಬಹಿರಂಗಗೊಂಡಿತ್ತು. ಈ ಮಧ್ಯೆ ಈ ಪೇಪರ್‌ ಲೀಕ್‌ ಮಾಡಿದ್ದ ಪತ್ರಕರ್ತೆಯ ಹತ್ಯೆ ಕೂಡ ನಿಗೂಢವಾಗಿಯೇ ನಡೆದೋಯ್ತು.

2016ರಿಂದ ಇದರ ತನಿಖೆ ನಡೆಯುತ್ತಲಿದ್ದು, ಇದೀಗ ನಟಿ ಐಶ್ವರ್ಯ ರೈ ಅವರ ವಿಚಾರಣೆಗೆಂದು ಸಮನ್ಸ್‌ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು ಇ.ಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕೂಡಿಟ್ಟ ಬಗ್ಗೆ ಅವರ ಉತ್ತರಿಸಬೇಕಿದೆ.

ಮೂಲಗಳ ಪ್ರಕಾರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಐಶ್ವರ್ಯಾ ರೈ ಬಚ್ಚನ್​ ಅವರಿಗೆ ಸೂಚಿಸಲಾಗಿದೆ. ಆದರೆ ವಿಚಾರಣೆಗೆ ಹಾಜರಾಗಲು ಬೇರೆ ದಿನಾಂಕವನ್ನು ಅವರು ಕೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಎರಡು ಬಾರಿ ಅವರು ವಿಚಾರಣೆ ದಿನಾಂಕ ಮುಂದೂಡಲು ಕೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net