ರಾಹುಲ್‌ ಗಾಂಧಿ ಬಾಯಲ್ಲಿ ‘ಹಿಂದೂ ಸರ್ಕಾರ’: ಕೆಂಡಾಮಂಡಲವಾದ ಓವೈಸಿ- ಟ್ವೀಟ್‌ ಮೂಲಕ ಕಿಡಿ

OYC
Published on

ನವದೆಹಲಿ: ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಂಸದ ರಾಹುಲ್‌ ಗಾಂಧಿ ಹಿಂದುತ್ವ ಮತ್ತು ಹಿಂದೂಗಳ ಬಗ್ಗೆ ಮಾತನಾಡಿದ್ದರು. ರಾಜಸ್ತಾನದ ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು, ಬಿಜೆಪಿ ಸರ್ಕಾರವನ್ನು ಟೀಕಿಸುತ್ತಾ, ದೇಶದಲ್ಲಿ ಹಿಂದುತ್ವವಾದಿಗಳ ಸರ್ಕಾರವಿದೆ ಹೊರತು ಹಿಂದೂಗಳ ಸರ್ಕಾರವಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದುತ್ವವಾದಿಗಳ ಕಿತ್ತೊಗೆದು ಹಿಂದೂಗಳ ಸರ್ಕಾರ ತರಬೇಕು ಎಂದು ಕರೆ ನೀಡಿದ್ದರು.

ರಾಹುಲ್‌ ಗಾಂಧಿಯವರ ಬಾಯಲ್ಲಿ ಹಿಂದೂ ಸರ್ಕಾರ ಎಂದು ಬಂದಿರುವುದನ್ನು ಕೇಳಿ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಟ್ವೀಟ್‌ ಮೂಲಕ ಅವರು ಕಿಡಿ ಕಾರಿದ್ದಾರೆ. ‘ಭಾರತ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ನೆಲೆಸಿದ್ದಾರೆ. ಆದರೆ ರಾಹುಲ್‌ ಅವರು ಹಿಂದೂ ಸರ್ಕಾರ ತರಬೇಕು ಎಂದಿರುವುದು ಸರಿಯಲ್ಲ. ಚುನಾವಣೆಯಲ್ಲಿ ಮತಗಳಿಕೆಗಾಗಿ ಹಿಂದೂಗಳನ್ನು ಓಲೈಕೆ ಮಾಡಲು ರಾಹುಲ್‌ ಗಾಂಧಿ ಈ ರೀತಿ ಮಾತನಾಡಿದ್ದಾರೆ.

ಹಿಂದೂ ಸರ್ಕಾರ ತರಬೇಕು ಎನ್ನುವ ಮೂಲಕ, ಚುನಾವಣಾ ತಂತ್ರದ ಮೊರೆ ಹೋಗಿದ್ದಾರೆ. ಇದೇನು ಜಾತ್ಯಾತೀತ ಅಜೆಂಡಾವೇ ಎಂದು ಅಸಾದುದ್ದೀನ್​ಹರಿಕಾಯ್ದಿದ್ದಾರೆ.

ಜೈಪುರ್‌ದಲ್ಲಿ ರಾಹುಲ್‌ ಅವರು, ’ಎರಡು ಜೀವಗಳಿಗೆ ಒಂದೇ ಆತ್ಮ ಇರುವುದು ಸಾಧ್ಯವಿಲ್ಲ, ಇದೇ ರೀತಿ ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ. ಹಿಂದೂ ಮತ್ತು ಹಿಂದುತ್ವ ಒಂದೇ ಪದವಲ್ಲ, ಇದು ಒಂದೇ ವಿಷಯವೂ ಅಲ್ಲ. ನಾನು ಹಿಂದೂ, ಆದರೆ ಹಿಂದುತ್ವವಾದಿ ಅಲ್ಲ. ಮಹಾತ್ಮ ಗಾಂಧಿ ಹಿಂದೂ... ಗೋಡ್ಸೆ ಹಿಂದುತ್ವವಾದಿ. ಏನೇ ನಡೆದರೂ ಹಿಂದೂ ಸತ್ಯವನ್ನು ಹುಡುಕುತ್ತಾನೆ. ಪ್ರಾಣ ಹೋದರೂ, ಕತ್ತರಿಸಲ್ಪಟ್ಟರು ಹಿಂದೂ ಸತ್ಯವನ್ನೇ ಹುಡುಕುತ್ತಾನೆ. ಅವರ ಮಾರ್ಗ ಸತ್ಯಾಗ್ರಹ. ಅವನು ತನ್ನ ಇಡೀ ಜೀವನವನ್ನು ಸತ್ಯದ ಹುಡುಕಾಟದಲ್ಲಿ ಕಳೆಯುತ್ತಾನೆ' ಎಂದು ರಾಹುಲ್ ಹೇಳಿದ್ದರು.

ಆದ್ದರಿಂದ ಮುಂದಿನ ಬಾರಿ ಹಿಂದೂ ಸರ್ಕಾರ ಬರಬೇಕಿದೆ ಎಂದಿದ್ದರು. ಇದು ಓವೈಸಿ ಅವರನ್ನು ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net