

ಲಖನೌ: ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಸಾವಿರಾರು ಬಾಕ್ಸ್ ಮದ್ಯದ ಬಾಟಲಿಗಳು ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.
ಇಟಾ ಜಿಲ್ಲೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಒಟ್ಟು 1,459 ಬಾಕ್ಸ್ಗಳು ಇದ್ದವು. ಇದರ ಮೌಲ್ಯ 35 ಲಕ್ಷ ರೂಪಾಯಿಯದ್ದಾಗಿದೆ. ಅಕ್ರಮ ಮದ್ಯಪೂರೈಕೆಗೆ ಸಂಬಂಧಿಸಿದಂತೆ ಪೊಲೀಸರು ಸೀಜ್ ಮಾಡಿದ್ದ ಬಾಕ್ಸ್ಗಳು ಇದಾಗಿದ್ದವು. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ ಇದಕ್ಕೆ ಇಲಿಗಳು ಕಾರಣ ಎಂದು ಹೇಳಿಕೆ ನೀಡಿದ್ದಾರೆ!
ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಭಾ ಚಹಲ್ ಹಾಗೂ ಎಸ್‍ಎಸ್‍ಪಿ ಸುನಿಲ್ ಸಿಂಗ್ ಅವರು ದಿಢೀರ್ ಇನ್ಸ್ಪೆಕ್ಷನ್ ವೇಳೆ ಠಾಣೆಗೆ ಆಗಮಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಟಲ್ ಕಾಣೆಯಾಗಿದ್ದು ಹೇಗೆ ಎಂದಾಗ ಎಸ್‍ಎಚ್‍ಒ ಇಂದ್ರೇಶ್‍ಪಾಲ್ ಸಿಂಗ್ ಹಾಗೂ ಪ್ರಧಾನ ಕ್ಲರ್ಕ್ ರಸಾಲ್ ಸಿಂಗ್ ದಡಬಡಾಯಿಸಿದ್ದಾರೆ. ನಂತರ ಇಲಿಗಳ ಕಾರಣ ನೀಡಿದ್ದಾರೆ.
ಇಲಿಗಳು ರಾತ್ರಿ ಬಂದಿದ್ದು ಬಾಕ್ಸ್ಗಳನ್ನು ಕಚ್ಚಿ ಹಾಳು ಮಾಡಿವೆ ಎಂದು ಹೇಳಿಕೆ ನೀಡಿದ್ದಾರೆ. ಅಕ್ರಮ ಮದ್ಯ ತುಂಬಿದ್ದ ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಇಲಿಗಳು ಕಚ್ಚಿದ್ದು, ಗಾಜಿನ ಬಾಟಲಿ ಒಡೆದು, ಇತರ ಹಾನಿಗೊಳಗಾದ ಚೀಲಗಳನ್ನು ಹರಿದಿವೆ ಎಂದಿದ್ದಾರೆ. ಆದರೆ ಬಾಟಲ್ಗಳನ್ನು ಎತ್ತಿಕೊಂಡು ಹೋದ್ವಾ ಎನ್ನುವ ಬಗ್ಗೆ ಇವರಲ್ಲಿ ಉತ್ತರ ಇದ್ದಂತಿಲ್ಲ!
ಈ ಕುರಿತು ತನಿಖೆಗೆ ಆಗ್ರಾ ವಲಯದ ಎಡಿಜಿ ಆದೇಶಿಸಿದ್ದಾರೆ. ಬಾಕ್ಸ್ಗಳನ್ನು ಇಲಿಗಳು ಡ್ಯಾಮೇಜ್ ಮಾಡಿವೆ ಎಂದು ಪೊಲೀಸ್ ಜನರಲ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಈ ವಿಷಯ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಗ್ಯಾಂಗ್‍ಸ್ಟರ್ ಬಂಟು ಯಾದವ್‍ಗೆ ಪೊಲೀಸರು ಮದ್ಯವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಎಸ್‍ಎಚ್‍ಒ ಹಾಗೂ ಕ್ಲರ್ಕ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಅವರಿಬ್ಬರನ್ನು ಅಮಾನತು ಮಾಡಲಾಗಿದೆ. ಎಸ್‍ಎಚ್‍ಒ ತಲೆಮರೆಸಿಕೊಂಡಿದ್ದಾರೆ.