ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್​ ಸಿನ್ಹಾ ನಾಮಪತ್ರ ಸಲ್ಲಿಕೆ- ಟಿಆರ್‌ಎಸ್ ಬೆಂಬಲ

yashwanth
Published on

ನವದೆಹಲಿ: ಬರುವ ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಹಿರಿಯ ರಾಜಕೀಯ ನೇತಾರ ಯಶವಂತ್ ಸಿನ್ಹಾ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸಂಸತ್​ ಭವನದಲ್ಲಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಸಿನ್ಹಾ ಜತೆಗೆ ಸಂಸದ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ​ ಖರ್ಗೆ ಸೇರಿದಂತೆ ಪಕ್ಷದ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಹಾಜರು ಇದ್ದರು.

ಬಿಜೆಪಿ ತೊರೆದು ಟಿಎಂಸಿ ಪಕ್ಷ ಸೇರಿದ್ದ ಯಶ್ವಂತ್​ ಸಿನ್ಹಾ, ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದರಿಂದ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಹಿರಿಯ ನಾಯಕರಾದ ಶರದ್​ ಪವಾರ್, ಗೋಪಾಲಕೃಷ್ಣ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರಪತಿ ಹುದ್ದೆಗೆ ಜಂಟಿ ಅಭ್ಯರ್ಥಿಯಾಗಲು ವಿರೋಧ ಪಕ್ಷದ ಪ್ರಸ್ತಾಪವನ್ನು ನಿರಾಕರಿಸಿದ ನಂತರ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ವಿಶಾಲ ತಳಹದಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸಿನ್ಹಾ ತಿಳಿಸಿದ್ದರು.

ಯಶವಂತ್ ಸಿನ್ಹಾ ಹಿನ್ನೆಲೆ:

6 ನವೆಂಬರ್ 1937 ರಂದು ಜನಿಸಿದ ಯಶವಂತ್ ಸಿನ್ಹಾ ಹಣಕಾಸು ಮಂತ್ರಿಯಾಗಿ 1990-1991 ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಮತ್ತು ಮಾರ್ಚ್ 1998-ಜುಲೈ 2002 ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜುಲೈ 2002ರಿಂದ ಮೇ 2004ರವರೆಗೆ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

2018ರ ಏಪ್ರಿಲ್​ 21ರಂದು ಬಿಜೆಪಿ ತೊರೆದ ಸಿನ್ಹಾ 13 ಮಾರ್ಚ್ 2021 ರಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ಗೆ ಸೇರಿದರು. 21 ಜೂನ್ 2022 ರಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅನ್ನು ತೊರೆದರು.

ಇದೇ ವೇಳೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಂಬರುವ ಚುನಾವಣೆಯಲ್ಲಿ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net