ಸೈಬರ್​ ಅಪರಾಧಿಗಳಿಗೆ ಶಾಕ್​ ನೀಡಿದ ಸಿಬಿಐ: ಏಕಕಾಲದಲ್ಲಿ ಬೆಂಗಳೂರು ಸೇರಿದಂತೆ 105 ಕಡೆ ದಾಳಿ

cbi
Published on

ನವದೆಹಲಿ: ಸೈಬರ್​ ಅಪರಾಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವ ಸೈಬರ್ ಅಪರಾಧಿಗಳ ವಿರುದ್ಧ ದೇಶಾದ್ಯಂತ 105 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ‘ಆಪರೇಷನ್ ಚಕ್ರ’ ಹೆಸರಿನಲ್ಲಿ ನಡೆದ ಈ ದಾಳಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು ಸಹಯೋಗ ನೀಡಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಾಲ್ಕು ಸ್ಥಳಗಳು, ದೆಹಲಿಯಲ್ಲಿ ಐದು, ಚಂಡೀಗಢದಲ್ಲಿ ಮೂರು ಮತ್ತು ಪಂಜಾಬ್, ಕರ್ನಾಟಕ ಮತ್ತು ಅಸ್ಸಾಂನಲ್ಲಿ ತಲಾ ಎರಡು ಸ್ಥಳಗಳಲ್ಲಿ ಕಾರ್ಯಾಚರಣ ನಡೆಸಲಾಗಿದೆ ಎಂದು ವರದಿಯಾಗಿದೆ. ಇದನ್ನು ಹೊರತುಪಡಿಸಿ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡ ಎರಡು ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆದಿದೆ.

ಈ ಶೋಧದ ವೇಳೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳು, 1.5 ಕೋಟಿ ರೂ. ನಗದು ಮತ್ತು 1.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸಿಬಿಐ ತಂಡವು 87 ಕಡೆಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು 18 ಕಡೆಗಳಲ್ಲಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ರಾಜಸ್ಥಾನದ ಒಂದೇ ಒಂದು ಸ್ಥಳದಿಂದ ಸಿಬಿಐ ₹ 1.5 ಕೋಟಿ ನಗದು ಮತ್ತು ಒಂದೂವರೆ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಡಾರ್ಕ್ ವೆಬ್‌ನಲ್ಲಿನ ಹಣಕಾಸಿನ ವಹಿವಾಟುಗಳು ಮತ್ತು ಸೈಬರ್‌ಕ್ರೈಮ್ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿರುವ ಬೃಹತ್ ಡಿಜಿಟಲ್ ಪುರಾವೆಗಳನ್ನು ಸಹ ಸಂಸ್ಥೆ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net