ಮೈದುನನ ಆಸ್ತಿಯಲ್ಲಿ ಅತ್ತಿಗೆಗೆ ಪಾಲು ಇದೆಯೆ? ಕಾನೂನು ಏನು ಹೇಳುತ್ತದೆ?

nyayadevate
Published on
ನಮ್ಮ ತಂದೆಯ ತಮ್ಮನಿಗೆ ಅವರ ಸ್ವಯಾರ್ಜಿತ ಆಸ್ತಿ ಇತ್ತು. ಅವರಿಗೆ ಮದುವೆ ಆಗಿರಲಿಲ್ಲ. ಅವರು ತೀರಿಕೊಂಡರು. ಆಮೇಲೆ ನಮ್ಮ ತಂದೆಯ ತಂದೆ ಮತ್ತು ತಾಯಿಯೂ ತೀರಿಕೊಂಡರು. ನಮ್ಮ ಚಿಕ್ಕಪ್ಪನ ಆಸ್ತಿ ನಮ್ಮ ತಂದೆಗೇ ಖಾತೆ ಆಯಿತು. ನಾವೇ ಉಳುತ್ತಿದ್ದೇವೆ. ನಮ್ಮ ತಾಯಿ ನನ್ನನ್ನೂ ನನ್ನ ತಂದೆಯನ್ನೂ ಬಿಟ್ಟು ಬೇರೆ ಊರಿಗೆ ಹೋಗಿ ಬಿಟ್ಟರು. ಮೂವತ್ತು ವರ್ಷಗಳಾದ ಮೇಲೆ ಈಗ ಬಂದು ನಮ್ಮ ಚಿಕ್ಕಪ್ಪನ ಆಸ್ತಿಯಲ್ಲಿ ಭಾಗ ಬೇಕು ಎನ್ನುತ್ತಿದ್ದಾರೆ. ಅವರಿಗೆ ಭಾಗ ಇದೆಯೇ?

ಉತ್ತರ:- ನಿಮ್ಮ ಚಿಕ್ಕಪ್ಪನ ಆಸ್ತಿ, ಅವರು ತೀರಿಕೊಂಡ ನಂತರ ಅವರ ತಾಯಿಗೆ ಮಾತ್ರ ಹೋಗುತ್ತದೆ. ನಿಮ್ಮ ಚಿಕ್ಕಪ್ಪನ ತಾಯಿ ತೀರಿಕೊಂಡಾಗ, ಅವರ ಆಸ್ತಿ, ಅವರ ಪತಿ(ಬದುಕಿದ್ದರೆ) ಮತ್ತು ಮಕ್ಕಳಿಗೆ ಹೋಗುತ್ತದೆ.

ನಿಮ್ಮ ಚಿಕ್ಕಪ್ಪನ ತಂದೆ ತಾಯಿ ಇಬ್ಬರೂ ಇಲ್ಲದೇ ಇರುವುದರಿಂದ, ನಿಮ್ಮ ತಂದೆಯ ತಾಯಿ ತೀರಿಕೊಂಡ ತಕ್ಷಣ , ಆ ಆಸ್ತಿ ನಿಮ್ಮ ತಂದೆಗೇ ಬರುತ್ತದೆ. ಇದು ಅವರ ಪ್ರತ್ಯೇಕ ಆಸ್ತಿ. ಇದರಲ್ಲಿ ನಿಮ್ಮ ತಂದೆಯ ಹೆಂಡತಿಗೂ, ನಿಮಗೂ ಸಹ ಯಾವುದೇಭಾಗ ಬರುವುದಿಲ್ಲ. ನಿಮ್ಮ ತಾಯಿ ಆಸ್ತಿಗೆ ಕೇಸು ಹಾಕಿದರೆ ಆಕೆಗೆ ಭಾಗ ಬರುವುದಿಲ್ಲ.

ಪತಿ ಬದುಕಿರುವಾಗ, ಆತನ ಆಸ್ತಿಯಲ್ಲಿ ಹೆಂಡತಿಗೆ ಭಾಗ ಇರುವುದಿಲ್ಲ. ಕೇವಲ ಜೀವನಾಂಶದ ಹಕ್ಕು ಮಾತ್ರ ಪತಿಯ ವಿರುದ್ಧ ಇರುತ್ತದೆ. ಆದರೆ, ನಿಮ್ಮ ತಂದೆ ತೀರಿಕೊಂಡರೆ, ಮತ್ತೆ ಆ ಅಸ್ತಿಯಲ್ಲಿ ನಿಮ್ಮ ತಾಯಿಗೂ ನಿಮಗೂ ಸಮಭಾಗ ಬರುತ್ತದೆ ಎನ್ನುವುದನ್ನು ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net