ಛಾಪಾ ಕಾಗದದಲ್ಲಿ ಏನೂ ಬೇಡವೆಂದು ತಾಯಿ ಬರೆದರೆ ಮಗುವಿಗೆ ಜೀವನಾಂಶ ಸಿಗುವುದಿಲ್ಲವೇ?

nyayadevate
Published on
ಪ್ರಶ್ನೆ: ನನ್ನ ಅಕ್ಕನ ಮದುವೆ ಸಂಪ್ರದಾಯದಂತೆ ನಮ್ಮ ಮಾವನ ಜೊತೆ ಆಗಿತ್ತು. ನಂತರ ನಮ್ಮ ಭಾವನಿಗೆ ಬೇರೆಯವರ ಜೊತೆ ಸಂಬಂಧ ಇದ್ದದ್ದು ತಿಳಿದು, ನಮ್ಮ ಅಕ್ಕ ಅವರನ್ನು ಬಿಟ್ಟು ತವರಿಗೆ ನಮ್ಮ ಮನೆಗೆ ಬಂದರು. ಅವರಿಗೆ ಒಂದು ಹೆಣ್ಣು ಮಗುವಿದೆ. ಈಗ ನಮ್ಮ ಭಾವ ನಮ್ಮ ಅಕ್ಕನಿಂದ ವಿಚ್ಛೇದನ ಪಡೆಯದೆ ಇನ್ನೊಂದು ಮದುವೆ ಆಗಿದ್ದಾರೆ. ಅವರಿಂದ ಮಗುವಿಗೆ ಜೀವನಾಂಶ ಹೇಗೆ ಪಡೆಯುವುದು? ನಮ್ಮ ಅಕ್ಕ ಅವರ ಮನೆಯಿಂದ ಹೊರಗೆ ಬರುವಾಗ ತನಗೆ ಏನೂ ಬೇಡ ಎಂದು ಛಾಪಾ ಕಾಗದದಲ್ಲಿ ಬರೆದುಕೊಟ್ಟಿದ್ದಾರಂತೆ. ನಮ್ಮ ಅಕ್ಕ ಸರ್ಕಾರೀ ಕೆಲಸದಲ್ಲಿ ಇದ್ದಾರೆ.

ಉತ್ತರ: ವಿವಾಹಿತ ಪತಿ ಅಥವಾ ಪತ್ನಿ ಬದುಕಿರುವಾಗ ವಿಚ್ಛೇದನ ಪಡೆಯದೆ, ಮತ್ತೊಂದು ಮದುವೆ ಆದರೆ ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಆಗುತ್ತದೆ. ನಿಮ್ಮ ಭಾವನ ಎರಡನೇ ಮದುವೆ ಬಗ್ಗೆ ಸಾಕ್ಷಿ ಆಧಾರಗಳನ್ನು ಪಡೆದು , ನಿಮ್ಮ ಅಕ್ಕನಿಂದ ಅವರ ವಿರುದ್ಧ ಎರಡನೇ ಮದುವೆ ಕೇಸನ್ನು ದಾಖಲಿಸಿ.

ನಿಮ್ಮ ಅಕ್ಕ ತನ್ನ ಮಗುವಿಗೆ ಜೀವನಾಂಶ ಕೇಳಿ ಪ್ರಕರಣ ದಾಖಲಿಸಬಹುದು. ನಿಮ್ಮ ಅಕ್ಕ ಕೆಲಸದಲ್ಲಿ ಇರುವುದರಿಂದ ಆಕೆಗೆ ಜೀವನಾಂಶ ಸಿಕ್ಕುವುದಿಲ್ಲ. ಆದರೆ ಮಗುವಿಗೆ ನಿಮ್ಮಭಾವ ಮತ್ತು ಅಕ್ಕ ಇಬ್ಬರೂ ಕೊಡಬೇಕಾಗುತ್ತದೆ. ನಿಮ್ಮ ಅಕ್ಕನ ಮಗುವಿಗೆ ಎಷ್ಟು ಖರ್ಚು ವೆಚ್ಚ ಆಗುತ್ತದೆ ಎನ್ನುವುದರ ವಿವರಣೆ ಕೊಟ್ಟು ಪ್ರಕರಣ ದಾಖಲಿಸಿ. ನ್ಯಾಯಾಲಯ ಮಗುವಿನ ಜೀವನಾಂಶ ಇಂತಿಷ್ಟು ಎಂದು ನಿರ್ಧರಿಸಿ, ನಿಮ್ಮ ಅಕ್ಕ ಎಷ್ಟು ಖರ್ಚು ವಹಿಸಿಕೊಳ್ಳಬಹುದು ಮತ್ತು ನಿಮ್ಮ ಭಾವ ಎಷ್ಟು ಕೊಡಬೇಕು ಎಂದು ತೀರ್ಪು ಕೊಡುತ್ತಾರೆ. ನಿಮ್ಮ ಅಕ್ಕ ಛಾಪಾ ಕಾಗದದಲ್ಲಿ ಬರೆದುಕೊಟ್ಟಿರುವ ಬಗ್ಗೆ ಯೋಚಿಸ ಬೇಡಿ. ಮಗುವಿನ ವಿಷಯದಲ್ಲಿ ಇದು ಯಾವ ರೀತಿಯಲ್ಲೂ ಅಡ್ಡ ಬರುವುದಿಲ್ಲ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net