

ಪ್ರಶ್ನೆ: ನಮ್ಮ ತಾತನಿಗೆ 2 ಹೆಣ್ಣುಮಕ್ಕಳು ಹಾಗೂ ಒಂದು ಗಂಡು (ನಮ್ಮ ತಂದೆ) ಆದರೆ ನಮ್ಮ ಅತ್ತೆಯರಿಬ್ಬರು ನಮ್ಮ ತಂದೆಗೆ ತಿಳಿಸದೇ 2006 ರಲ್ಲಿ ನಮ್ಮ ತಾತನ 4ಎಕರೆ ಜಮೀನನ್ನು ದಾನಪತ್ರ ಮಾಡಿಸಿಕೊಂಡಿರುತ್ತಾರೆ, ಹಾಗೂ ನಮ್ಮ ತಾತ 2012ರಲ್ಲಿ ತೀರಿಹೋಗಿರುತ್ತಾರೆ,,ನಮ್ಮ ತಂದೆಗೆ ನಾವು 3 ಜನ ಗಂಡುಮಕ್ಕಳು ಹಾಗೂ ನಮಗೂ ನಮ್ಮ ತಾತನ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶ ಇದೆಯೋ ನ್ಯಾಯಾಲಯದಲ್ಲಿ ಕೇಸು ಹಾಕಬಹುದಾ ತಿಳಿಸಿ ಅವರು ಮಾಡಿಸಿಕೊಂಡಿರುವ ದಾನಪತ್ರವನ್ನು ರದ್ದು ಮಾಡಿಸಬಹುದಾ ದಯವಿಟ್ಟು ತಿಳಿಸಿ
ಉತ್ತರ: ನಿಮ್ಮ ತಾತನ ಸ್ವಯಾರ್ಜಿತ ಆಸ್ತಿಯನ್ನು ಅಥವಾ ನಿಮ್ಮ ತಾತನ ಪ್ರತ್ಯೇಕ /ವೈಯಕ್ತಿಕ ಆಸ್ತಿಯನ್ನು ಅವರು ತಮ್ಮ ಹೆಣ್ಣು ಮಕ್ಕಳಿಗೆ ದಾನ ಮಾಡಿದ್ದರೆ, ಆ ದಾನ ಪತ್ರ ನೋಂದಾಯಿತವಾಗಿದ್ದರೆ, ನೀವು ಅದನ್ನು ಈಗ ಪ್ರಶ್ನೆ ಮಾಡುವಂತಿಲ್ಲ.
ನೋಂದಾಯಿತ ದಾನ ಪತ್ರವನ್ನು ನಿಮ್ಮ ತಾತ ತನ್ನ ಜೀವಿತಕಾಲದಲ್ಲಿಯೇ ರದ್ದು ಮಾಡಲು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದ ಮೇಲೆ, ಆ ದಾನ ಕ್ರಮವು ನಿಮ್ಮ ತಾತನ ಸ್ವ ಇಚ್ಛೆಯಿಂದಲೇ ಆಗಿದೆ ಎನ್ನುವುದನ್ನು ಕಾನೂನು ಪರಿಗಣಿಸುತ್ತದೆ. ಹೀಗಾಗಿ ನೀವು ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ.
ಕೇವಲ ಮೋಸದಿಂದ ಮಾಡಿಸಿಕೊಂಡ ದಾನಪತ್ರದ ರದ್ದು ಕ್ರಮಕ್ಕೆ ಕೇಸು ಹಾಕಬಹುದು. ದಾನ ಪತ್ರದ ರದ್ದುಮಾಡುವಿಕೆಯ ದಾವೆಯನ್ನು ದಾನ ಪತ್ರವಾದ ಮೂರು ವರ್ಷದ ಒಳಗೆ ಹಾಕ ಬೇಕು. ಅಥವಾ ಮೋಸದಿಂದ ದಾನಪತ್ರವನ್ನು ಮಾಡಿಸಿಕೊಂಡಿದ್ದರೆ, ಅಥವಾ ದಾನ ಪತ್ರವು ಸೃಷ್ಟಿ ಮಾಡಿಕೊಂಡಿರುವ ಪತ್ರವಾಗಿದ್ದರೆ ಆಗ ಅಂತಹ ಪತ್ರದ ಇರುವಿಕೆಯ ಅರಿವು ಬಂದ ಮೂರು ವರ್ಷದ ಒಳಗೆ ದಾವೆ ಹಾಕಬಹುದು.
ನಿಮ್ಮ ವಿಷಯದಲ್ಲಿ , ನಿಮ್ಮ ತಾತ 2006ರಲ್ಲಿ ದಾನ ಪತ್ರ ಮಾಡಿ 2012ರಲ್ಲಿ ಮೃತರಾಗಿದ್ದಾರೆ. ಈಗ ಅವರು ಮೃತರಾದ ಮೇಲೆ 8 ವರ್ಷಗಳ ಮೇಲೆ ನೀವು ದಾವೆ ಹಾಕಿದರೆ ಪ್ರಯೋಜನ ಆಗುವ ಸಂಭವ ಕಡಿಮೆ.
ಸೃಷ್ಟಿಸಿಕೊಂಡ ದಾನ ಪತ್ರವಾದಾಗ ಮಾತ್ರ, ದಾವೆ ಹಾಕಲು ಆಗಿರುವ ಕಾಲ ವಿಳಂಬದ ಬಗ್ಗೆ ಸರಿಯಾದ ವಿವರಣೆ ಕೊಟ್ಟು ನೀವು ಮುಂದುವರೆಯ ಬಹುದು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.