ಒಬ್ಬಳು ಬದುಕಿದ್ದಾಗ ಇನ್ನೊಂದು ಮದ್ವೆಯಾದರೆ ಎರಡನೇ ಪತ್ನಿಗೆ ಆಸ್ತಿಯಲ್ಲಿ ಹಕ್ಕು ಇದ್ಯಾ?

nyayadevate
Published on

ಪ್ರಶ್ನೆ: ನನ್ನ ತಂದೆಗೆ ಇಬ್ಬರು ಹೆಂಡತಿಯರು. ನಾನು ಮೊದಲನೆಯ ಹೆಂಡತಿಯ ಮಗ. ಎರಡನೆಯ ಹೆಂಡತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ನನ್ನ ತಾಯಿ ಇತ್ತೀಚೆಗೆ ಆರು ತಿಂಗಳ ಹಿಂದೆ ತೀರಿಕೊಂಡರು. ನನ್ನ ತಂದೆ ಒಂದು ತಿಂಗಳ ಹಿಂದೆ ತೀರಿಕೊಂಡರು. ನಮ್ಮ ತಂದೆಗೆ ಹತ್ತು ಎಕರೆ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಎರಡು ಎಕರೆ ಜಮೀನು ಇದೆ. ಆ ಜಮೀನಿನಲ್ಲಿ ಇರುವ ಮನೆಯಲ್ಲಿ ನಮ್ಮ ಚಿಕ್ಕಮ್ಮ ವಾಸ ಮಾಡುತ್ತಿದ್ದಾರೆ.

ನಾನು ಇದುವರೆಗೆ ಜಮೀನಿನ ಬೆಳೆಯಲ್ಲಿ ಮಾರಾಟದ ಹಣದಲ್ಲಿ ಒಂದು ಕಾಸೂ ಪಡೆದಿಲ್ಲ. ಈಗ ಭಾಗ ಕೇಳಿದರೆ, ನಮ್ಮ ತಮ್ಮಂದಿರು ನಿನಗೆ ಭಾಗ ಇಲ್ಲ ಎನ್ನುತ್ತಿದ್ದಾರೆ. ನಮ್ಮ ತಂದೆ ವಿಲ್ ದಾನ ಪತ್ರ ಏನೂ ಮಾಡಿಲ್ಲ. ಜಮೀನಿನ ಕಬ್ಜೆಯಲ್ಲಿ ನನ್ನ ತಮ್ಮಂದಿರೇ ಇದ್ದಾರೆ. ನಾನು ಭಾಗ ಪಡೆಯುವುದು ಹೇಗೆ ? ತಿಳಿಸಿ ಸಹಾಯ ಮಾಡಿ.

ಉತ್ತರ : ಮೃತ ಹಿಂದೂ ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ಹೆಂಡತಿ ಮತ್ತು ಮಕ್ಕಳಿಗೆ ಸಮ ಭಾಗ ಇರುತ್ತದೆ. ಮೊದಲ ಹೆಂಡತಿ ಬದುಕಿರುವಾಗ ಎರಡನೇ ಮದುವೆ ಆಗಿದ್ದರೆ ಎರಡನೇ ಪತ್ನಿಗೆ ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಇನ್ನು ಪಿತ್ರಾರ್ಜಿತ ಆಸ್ತಿಯ ವಿಷಯಕ್ಕೆ ಬಂದರೆ ನಿಮ್ಮ ತಂದೆಗೆ ಎಲ್ಲರೂ ಗಂಡು ಮಕ್ಕಳೇ ಇರುವುದರಿಂದ , ನಿಮ್ಮ ಮೂವರಿಗೂ ಅದೂ ಸಮಭಾಗ ಆಗುತ್ತದೆ.

ಹೀಗಾಗಿ ನೀವು ಧೈರ್ಯವಾಗಿ ನಿಮ್ಮ ಮೂರನೇ ಒಂದು ಭಾಗಕ್ಕೆ ದಾವೆ ಹಾಕಿ. ಪ್ರಕರಣ ನಡೆಯುವವರೆಗೆ ಆಸ್ತಿಯನ್ನು ಪರಭಾರೆ ಮಾಡಬಾರದೆಂದು ಇಂಜಂಕ್ಷನ್ ಆದೇಶವನ್ನು ಪಡೆದುಕೊಳ್ಳಿ. ಜಮೀನಿನ ಬೆಳೆಯ ಲೆಕ್ಕಾಚಾರಕ್ಕೆ ರಿಸೀವರ್ ಅರ್ಜಿಯನ್ನೂ ಹಾಕಿಸಿ.

ಪ್ರಕರಣದ ನೋಟೀಸು ನಿಮ್ಮ ಸಹೋದರರಿಗೆ ಜಾರಿ ಆದ ಮೇಲೆ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ, ಕೂತು ಮಾತಾಡಿ ಎಲ್ಲರೂ ಒಪ್ಪಿಗೆಗೆ ಬಂದರೆ ಅನುಕೂಲಕ್ಕೆ ಅನುಗುಣವಾಗಿ ಆಸ್ತಿ ಹಂಚಿಕೊಳ್ಳಿ. ನಿಮ್ಮ ತಮ್ಮಂದಿರು ಒಪ್ಪದಿದ್ದರೆ ಧೈರ್ಯವಾಗಿ ಕೇಸು ನಡೆಸಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net