ಬೇರೆ ರಾಜ್ಯದಲ್ಲಿ ಡಿವೋರ್ಸ್​ ಕೇಸ್​ ಹಾಕಿದರೆ ಅಲ್ಲಿಯ ಕೋರ್ಟ್​ಗೆ ಓಡಾಡುತ್ತಲೇ ಇರಬೇಕೆ?

nyayadevate
Published on

ಪ್ರಶ್ನೆ: ನಾನು ಉತ್ತರಭಾರತದ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆ ಆಗಿದ್ದೆ. ಒಬ್ಬಳು ಮಗಳಿದ್ದಾಳೆ. ನನ್ನ ಸಂಪಾದನೆಯನ್ನೆಲ್ಲಾ ಗಂಡನೇ ತೆಗೆದುಕೊಂಡು ನನಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ. ಅದನ್ನು ತಡೆದುಕೊಳ್ಳಲಾಗದೇ ನಾನು ಈಗ ಬೆಂಗಳೂರಿಗೆ ನನ್ನ ತವರಿಗೆ ವಾಪಸ್ ಬಂದು 3 ವರ್ಷವಾಗಿದೆ. ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳೂ ನನ್ನ ಹತ್ತಿರವೇ ಇದ್ದಾಳೆ. ಈಗ ನನ್ನ ಗಂಡ ಉತ್ತರಭಾರತದಲ್ಲಿ ವಿಚ್ಛೇದನದ ಕೇಸು ಹಾಕಿದ್ದಾನೆ. ನನಗೆ ಅಲ್ಲಿಗೆ ಓಡಾಡಲು ಆಗುವುದಿಲ್ಲ. ನನಗೆ ನನ್ನ ಗಂಡನ ಕಡೆಯವರಿಂದ ಪ್ರಾಣ ಭಯವಿದೆ. ಆ ಕೇಸನ್ನು ನಡೆಸಲು ನಾನು ಅಲ್ಲಿಗೆ ಹೋಗಲೇ ಬೇಕೇ? ನನ್ನ ಮಗಳನ್ನು ನನ್ನ ಗಂಡ ತೆಗದುಕೊಂಡು ಹೋಗುತ್ತಾನೇನೋ ಎನ್ನುವ ಭಯವೂ ಇದೆ. ಅವಳ ರಕ್ಷಣೆಗೆ ನಾನೇನು ಮಾಡಬಹುದು?

 ಉತ್ತರ: ನೀವು ಕೂಡಲೇ ಸುಪ್ರೀಂಕೋರ್ಟಿನಲ್ಲಿ ಟ್ರಾನ್ಸಫರ್ ಪೆಟಿಷನ್ ಹಾಕಿ. ನಿಮ್ಮ ಪತಿ ಉತ್ತರ ಭಾರತದಲ್ಲಿ ಹಾಕಿರುವ ವಿಚ್ಛೇದನದ ಪ್ರಕರಣದ ಪ್ರಕ್ರಿಯೆಯನ್ನು ಸ್ಟೇ ಮಾಡಿಸಿ. ಒಂದು ರಾಜ್ಯದ ಒಂದು ಕೋರ್ಟಿನಿಂದ ಅದೇ ರಾಜ್ಯದ ಮತ್ತೊಂದು ಕೋರ್ಟಿಗೆ ವರ್ಗಾವಣೆ ಮಾಡಬೇಕೆಂದು ಕೋರಿ ಆ ರಾಜ್ಯದ ಹೈಕೋರ್ಟ್‍ನಲ್ಲಿ ವರ್ಗಾವಣೆಯ ಅರ್ಜಿ ಸಲ್ಲಿಸಬಹುದು. ಆದರೆ ಒಂದು ಬೇರೆ ರಾಜ್ಯದಲ್ಲಿ ಇರುವ ಪ್ರಕರಣವನ್ನು ಮತ್ತೊಂದು ರಾಜ್ಯದ ಕೋರ್ಟಿಗೆ ವರ್ಗಾವಣೆ ಮಾಡಲು ಆದೇಶ ಪಡೆಯಲು ಸುಪ್ರೀಂ ಕೋರ್ಟಿಗೇ ಅರ್ಜಿ ಸಲ್ಲಿಸಬೇಕು.

ಮಗಳು ನಿಮ್ಮ ಜತೆ ಇರುವುದರಿಂದ, ನೀವು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನಿಮ್ಮ ಮಗಳ ಪರ್ಮನೆಂಟ್ ಕಸ್ಟಡಿ ನಿಮಗೇ ಕೊಡಬೇಕೆಂದು ಎಂದೂ ಮತ್ತು ಮಗುವಿನ ಗಾರ್ಡಿಯನ್ ನೀವೇ ಎಂದು ಹಕ್ಕು ಘೋಷಣೆ ಮಾಡಬೇಕೆಂದೂ ಪ್ರಕರಣ ದಾಖಲಿಸಿ. ಅದೇ ಪ್ರಕರಣದಲ್ಲಿ ಮಗುವನ್ನು ನಿಮ್ಮಿಂದ ನಿಮ್ಮ ಪತಿ ಪ್ರತ್ಯೇಕಿಸಬಾರದೆನ್ನುವ ಮಧ್ಯಂತರ ಅರ್ಜಿಯನ್ನೂ ಹಾಕಿ ಮಧ್ಯಂತರ ಆದೇಶವನ್ನು ಪಡೆದುಕೊಳ್ಳಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net