

ನನಗೆ ನನ್ನ ಗಂಡ ತಿಂಗಳಿಗೆ ಸಾವಿರ ರೂಪಾಯಿ ಕೊಡಬೇಕೆಂದು ಆದೇಶ ಆಗಿದೆ. ಇದಕ್ಕೇ ನಾನು ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಆದೇಶದಂತೆ, ನನ್ನ ಗಂಡ ಹಣವನ್ನೂ ಕೊಟ್ಟಿಲ್ಲ. ನನಗೆ ಕೋರ್ಟಿನಲ್ಲಿ ಆದೇಶ ಆಗಿರುವ ಹಣದ ವಸೂಲಾತಿಗೂ ನಾನು ಕೇಸು ಹಾಕಿಲ್ಲ. ಅದಕ್ಕೂ ವಿಪರೀತ ಖರ್ಚು ಆಗುತ್ತೆ ಎಂದು ಹೆದರಿಸುತ್ತಿದ್ದಾರೆ.
ಈಗ ನನಗೆ ಡಿವೋರ್ಸ್ ಬೇಕಿದೆ. ನಾನು ಕೇಸು ಹಾಕಬಹುದೇ? ನನಗೆ ಸಿಗುವುದೇ? 15 ವರ್ಷಕ್ಕೇ ಮದುವೆ ಮಾಡಿದ್ದಕ್ಕೆ ನನ್ನ ಪಾಲಕರಿಗೆ ಶಿಕ್ಷೆ ಆಗುತ್ತದೆಯೆ? ನನಗೆ ಕೋರ್ಟು ಖರ್ಚಿಗೆ ಹಣವೂ ಇಲ್ಲ. ಈಗ ನಾನು ಏನು ಮಾಡಬೇಕು? ತಿಳಿಸಿ.
ಉತ್ತರ: ನಿಮಗೆ ಹದಿನೆಂಟು ವರ್ಷ ಆದಕೂಡಲೇ ನಿಮ್ಮ ಮದುವೆಯನ್ನು ಶೂನ್ಯೀಕರಣಗೊಳಿಸಬೇಕೆಂದು ಅರ್ಜಿ ಹಾಕಿದ್ದರೆ ನಿಮ್ಮ ಮದುವೆಯನ್ನೇ ರದ್ದು ಮಾಡುವ ಆದೇಶವನ್ನು ನ್ಯಾಯಾಲಯ ಕೊಡಬಹುದಿತ್ತು. ಈಗಲೂ ನೀವು ವಿಚ್ಛೇದನಕ್ಕೆ ಅರ್ಜಿ ಹಾಕಬಹುದು.
ಪತಿಯಿಂದ ನಿಮಗೆ ಆಗಿರುವ ಕ್ರೂರತೆಯ ವಿವರಗಳನ್ನು ಕೊಡಿ. ಅದರ ಆಧಾರದ ಮೇಲೆ ಮತ್ತು ಜೀವನಾಂಶದ ಆದೇಶವಾದರೂ ಅದನ್ನು ಪುರಸ್ಕರಿಸಿಲ್ಲ ಎನ್ನುವುದರ ಆಧಾರದ ಮೇಲೆ ವಿಚ್ಛೇದನ ಸಿಗುತ್ತದೆ. ಖರ್ಚಿನ ಬಗ್ಗೆ ನೀವು ಹೆದರಬೇಕಿಲ್ಲ. ವಿಚ್ಛೇದನದ ಪ್ರಕರಣಕ್ಕೆ ನೀವು ನೂರು ರೂಪಾಯಿಯ ಕೋರ್ಟು ಸ್ಟಾಂಪು ಕೊಟ್ಟರೆ ಸಾಕು.
ಅದಕ್ಕೂ ಬದಲಾಗಿ, ನೀವು ನಿಮ್ಮ ತಾಲೂಕಿನ ಕಾನೂನು ಸೇವಾಕೇಂದ್ರಕ್ಕೆ ಹೋಗಿ ಅರ್ಜಿ ಕೊಡಿ. ಅವರು ನಿಮಗೆ ಉಚಿತವಾಗಿ ವಕೀಲರ ಸೇವೆ ಕೊಡುತ್ತಾರೆ. ಸ್ಟಾಂಪು ಖರ್ಚನ್ನೂ ಅವರೇ ಕೊಡುತ್ತಾರೆ. ನಿಮಗೆ ಒಂದು ರೂಪಾಯಿಯ ಖರ್ಚೂ ಆಗುವುದಿಲ್ಲ.
ನಿಮ್ಮ ಪತಿಯಿಂದ ಬರಬೇಕಾದ ಜೀವನಾಂಶದ ಹಣವನ್ನೂ ಕೊಡಿಸುತ್ತಾರೆ. ಇನ್ನೂ ಕಾಲಹರಣ ಮಾಡಬೇಡಿ. ನಿಮ್ಮ ತಂದೆ ತಾಯಿಗೆ ಯಾವ ತೊಂದರೆಯೂ ಆಗುವುದಿಲ್ಲ.