ಭದ್ರತಾ ಸಿಬ್ಬಂದಿಗೆ ಶಾಕ್​ ಕೊಟ್ಟ ಮಮತಾ: ಇನ್ಮುಂದೆ ಮೊಬೈಲ್​ಫೋನ್​ ಬ್ಯಾನ್​- ಇದಕ್ಕೆ ಕಾರಣ ಕಬ್ಬಿಣದ ರಾಡ್​!

mamatha- mobile
Published on

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮನೆ ಹಾಗೂ ಕಚೇರಿಯ ಉಸ್ತುವಾರಿ ವಹಿಸಿಕೊಂಡಿರುವ ಕಿರಿಯ ಭದ್ರತಾ ಸಿಬ್ಬಂದಿ ಮೊಬೈಲ್​ ಫೋನ್​ ಬಳಕೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣ, ವ್ಯಕ್ತಿಯೊಬ್ಬ ಅವರ ಮನೆಯ ಆವರಣದೊಳಕ್ಕೆ ಭದ್ರತೆಯನ್ನು ಮೀರಿ ಕಬ್ಬಿಣದ ರಾಡ್​ ತಂದಿರುವುದು!

ನಿನ್ನೆ ಮಮತಾ ಅವರ ಮನೆಯ ಆವರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದ. ಮುಖ್ಯಮಂತ್ರಿಗಳಿಗೆ ನೀಡುವ ಝಡ್​ ಪ್ಲಸ್​ ಭದ್ರತೆಯನ್ನು ಮಮತಾ ಅವರಿಗೆ ನೀಡಲಾಗಿದ್ದರೂ ಅದನ್ನು ಭೇದಿಸಿಕೊಂಡು ಬಂದಿದ್ದ ಹಫೀಜುಲ್ ಮೊಲ್ಲಾಹ್ ಎಂಬಾತ ದೀದಿ ಮನೆಯ ಗೋಡೆಯನ್ನು ಅಳೆದು, ಕಬ್ಬಿಣದ ರಾಡ್​ ಅಡಗಿಸಿಟ್ಟುಕೊಂಡು ಅಲ್ಲಿಯೇ ರಾತ್ರಿ ಕಳೆದಿದ್ದ. ಇಷ್ಟಾದರೂ ಭದ್ರತಾ ಸಿಬ್ಬಂದಿಗೆ ಇದರ ಅರಿವೇ ಇರಲಿಲ್ಲ.

ಏನಿದು ಘಟನೆ?

ಮಮತಾ ಬ್ಯಾನರ್ಜಿಯವರು ಸಾಮಾನ್ಯವಾಗಿ ಪತ್ರಿಕಾಗೋಷ್ಠಿ ನಡೆಸಲು ಜಾಗದಲ್ಲಿಯೇ ಹಫೀಜುಲ್ ಮೊಲ್ಲಾಹ್ ಎಂಬ ವ್ಯಕ್ತಿ ಅಡಗಿಕುಳಿತುಕೊಂಡಿದ್ದು, ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ. ನಸುಕಿನ 1.20 ರ ಸುಮಾರಿಗೆ ಬ್ಯಾನರ್ಜಿಯವರ ನಿವಾಸವನ್ನು ಪ್ರವೇಶಿಸಿ ಮರುದಿನ ಬೆಳಗ್ಗೆ 8 ಗಂಟೆಯವರೆ ಆವರಣದೊಳಗೆ ಇದ್ದದ್ದು ತಿಳಿದುಬಂದಿದೆ. ಶರ್ಟ್ ಅಡಿಯಲ್ಲಿ ಕಬ್ಬಿಣದ ರಾಡ್ ಬಚ್ಚಿಟ್ಟುಕೊಂಡು ಒಳಗೆ ನುಗ್ಗಿದ್ದಾನೆ.

ಸಿಸಿಟಿವಿ ಫುಟೇಜ್​ ನೋಡಿದಾಗ ಕೃತ್ಯಕ್ಕೆ ಮುನ್ನ ಆತ ಮಮತಾ ಅವರ ಮನೆಯ ಗೋಡೆಗಳನ್ನು ಅಳತೆ ಮಾಡಿರುವುದು ಸಿಸಿಟಿವಿಯಿಂದ ತಿಳಿದುಬಂದಿದೆ. ಹೀಗೆ ಮಾಡಿದ ಮರುದಿನ ಮನೆಯ ಆವರಣದೊಳಗೆ ಎಲ್ಲರ ಕಣ್ಣುತಪ್ಪಿಸಿ ನುಗ್ಗಿದ್ದಾನೆ.

ಅನುಮಾನಾಸ್ಪದವಾಗಿದ್ದ ಈ ವ್ಯಕ್ತಿಯ ಮೇಲೆ ಭದ್ರತಾ ಸಿಬ್ಬಂದಿ ದೃಷ್ಟಿ ಬೀಳುತ್ತಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ರಾಡ್ ಕೆಳಕ್ಕೆ ಬಿದ್ದಿದೆ. ನಂತರ ವಿಚಾರಣೆ ಮಾಡಿದಾಗ ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಆತನ ಕುಟುಂಬದವರು ಹೇಳಿರುವುದಾಗಿ ವರದಿಯಾಗಿದೆ. ಆದರೆ ಈತ ಗೋಡೆಯನ್ನು ಏತಕ್ಕೆ ಅಳತೆ ಮಾಡುತ್ತಿದ್ದ? ಈತ ಯಾರು? ರಾಡ್​ ಯಾಕೆ ತಂದಿದ್ದ ಎನ್ನುವುದು ಗೊತ್ತಾಗಲಿಲ್ಲ.

ಇದರ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಮತಾ ಬ್ಯಾನರ್ಜಿಯವರಿಗೆ ನೀಡಲಾಗಿರುವ ಅತ್ಯಂತ ಕಠಿಣ ಝಡ್​ಪ್ಲಸ್​ ಭದ್ರತೆಯನ್ನೂ ಮೀರಿ ಆತ ನುಗ್ಗಿರುವುದು ಹೇಗೆ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.

ಮೊಬೈಲ್​ಫೋನ್​ನಲ್ಲಿ ಭದ್ರತಾ ಸಿಬ್ಬಂದಿ ಮುಳುಗಿರುವ ಸಾಧ್ಯತೆ ಇದೆ ಎಂದು ಊಹಿಸಿದ್ದರಿಂದಲೋ ಏನೋ ಸದ್ಯ ಕಿರಿಯ ಭದ್ರತಾಸಿಬ್ಬಂದಿಗೆ ಮೊಬೈಲ್​ ಫೋನ್​ ಬ್ಯಾನ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net