ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಸುಳಿವು ಕೊಟ್ಟವರಿಗೆ 25 ಲಕ್ಷ ರೂ. ಸಹಚರರ ತಲೆಗೆ 15 ಲಕ್ಷ ರೂ.

Dawood Ibrahim sister Haseena Parkar in Mumbai
Published on

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್​ಗಳಲ್ಲಿ ಒಬ್ಬನಾದ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ಕೊಟ್ಟವರಿಗೆ 25 ಲಕ್ಷ ರೂ. ನಗದನ್ನು ಬಹುಮಾನವಾಗಿ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಘೋಷಿಸಿದೆ.

ಈತನ ಜೊತೆಗೆ, ಇಬ್ರಾಹಿಂನ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್ ಹಾಗೂ ಆತನ ಸಹಾಯಕರಾದ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್‍ನ ಸುಳಿವು ನೀಡಿದವರಿಗೆ ತಲಾ 15 ಲಕ್ಷ ರೂ. ನಗದು ನೀಡುವುದಾಗಿ ಎನ್ಐಎ ಘೋಷಿಸಿದೆ.

ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂ ತೊಡಗಿದ್ದ. ಈಗಾಗಲೇ 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು.

ಈತ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಹಿಜ್ಬುಲ್ ಮುಜಾಹಿದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಮತ್ತು ಆತನ ಆಪ್ತ ಸಹಾಯಕ ಅಬ್ದುಲ್ ರೌಫ್ ಅಸ್ಗರ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ.

1933ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳು ಬಾಂಬ್ ಉತ್ಪಾದನಾ ತರಬೇತಿಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ದಾವೂದ್ ಇಬ್ರಾಹಿಂ ಆಯ್ಕೆ ಮಾಡಿದ್ದ ಉಗ್ರರು ಪಾಕಿಸ್ತಾನದಲ್ಲಿ ಬಾಂಬ್ ತಯಾರಿಕಾ ತರಬೇತಿಯನ್ನು ಪಡೆದಿದ್ದರು. 15 ದಿನಗಳ ಕಾಲ ನಡೆದ ಬಾಂಬ್ ತಯಾರಿಕಾ ತರಬೇತಿ ಸಂದರ್ಭದಲ್ಲಿ ಉಗ್ರ ದಾವೂದ್ ಇಬ್ರಾಹಿಂ ಕೂಡ ಪಾಕಿಸ್ತಾನದಲ್ಲಿದ್ದ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net