

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಶಾಲೆಗಳಲ್ಲಿ ಇನ್ನುಮುಂದೆ ಸಸ್ಯಾಹಾರ ಭೋಜನಕ್ಕೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಅಂಗವಾಗಿ ಶಾಲೆಗಳಲ್ಲಿ ಒಂದು ದಿನ ಶುದ್ಧ ಸಸ್ಯಾಹಾರ ಭೋಜನ ನೀಡುವ ಮೂಲಕ ಸಸ್ಯಾಹಾರದ ಪ್ರಕ್ರಿಯೆ ಆರಂಭಿಸಲಾಗಿದೆ.
ಪಬ್ಲಿಕ್ ಶಾಲೆಗಳಲ್ಲಿ 'ಸಸ್ಯಾಹಾರ ಶುಕ್ರವಾರ'ಕ್ಕೆ (ವೇಗನ್ ಫ್ರೈಡೇ) ಚಾಲನೆ ದೊರೆತಿದ್ದು, ಇದು ಯಶಸ್ವಿಯಾದರೆ ನಿಧಾನವಾಗಿ ಸಸ್ಯಾಹಾರ ಭೋಜನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇದು ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿ ಆಯ್ಕೆಯಾಗಿರುವ ಎರಿಕ್ ಆ್ಯಡಮ್ಸ್ ಅವರ ವಿಚಾರಧಾರೆ. ತಾವು ಮಾಂಸಾಹಾರವನ್ನು ತ್ಯಜ್ಯಿಸಿ ಶುದ್ಧ ಸಸ್ಯಾಹಾರಿಯಾಗಿದ್ದು, ಮಕ್ಕಳು ಇದನ್ನೇ ಪಾಲನೆ ಮಾಡಿದರೆ ಒಳ್ಳೆಯದು. ಆದ್ದರಿಂದ ಆರಂಭದಲ್ಲಿ ಒಂದು ದಿನ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆ್ಯಡಮ್ಸ್ ಹೇಳಿದ್ದಾರೆ.
ವಾರಾಂತ್ಯದ ದಿನಗಳಲ್ಲಿ ಬೇಕಿದ್ದರೆ ಜನರು ತಮ್ಮ ಇಷ್ಟದ ಆಹಾರ ತಿನ್ನಲಿ. ಆದರೆ ಜೈಲುಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಮುಖ್ಯವಾಗಿ ನಮ್ಮ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯಕರ ಆಹಾರ ಬೇಕು. ಆದ್ದರಿಂದ ಸಸ್ಯಾಹಾರವನ್ನೇ ನೀಡಲು ಚಿಂತನೆ ನಡೆಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಇದನ್ನು ಎಲ್ಲರೂ ಪಾಲನೆ ಮಾಡಬಹುದು ಎನ್ನಿಸುತ್ತಿದೆ ಎಂದಿದ್ದಾರೆ ಆ್ಯಡಮ್ಸ್. ಮಧುಮೇಹವನ್ನು ಸಸ್ಯಾಹಾರದಿಂದ ಹತೋಟಿಗೆ ತರಬಹುದು. ಜಂಕ್ ಫುಡ್ ಜೀವನಶೈಲಿಯಲ್ಲಿ ಆರೋಗ್ಯಕ್ಕೆ ಮಾರಕವಾಗಿದೆ. ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಯ ಶೇಕಡಾ 40ರಷ್ಟು ಮಕ್ಕಳು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರು. ಇದಕ್ಕೆಲ್ಲಾ ಮಾಂಸಾಹಾರ ಮತ್ತು ಜಂಕ್ಪುಡ್ ಕಾರಣ. ಆದ್ದರಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಈ ಬಗ್ಗೆ ಸುತ್ತೋಲೆ ನೀಡಲಾಗಿದೆ. ಒಂದು ದಿನ ಸಸ್ಯಾಹಾರ ಸೇವಿಸಿ ಎಂದು ತಿಳಿಸಲಾಗಿದೆ. ಒಂದು ವೇಳೆ ಯಾರಿಗಾದರೂ ಇದರ ಬಗ್ಗೆ ಆಕ್ಷೇಪವಿದ್ದರೆ ಮಾಂಸಾಹಾರಕ್ಕೆ ಮನವಿ ಸಲ್ಲಿಸಬಹುದು. ಸಸ್ಯಾಹಾರ ಭೋಜನಕ್ಕೆ ಹಾಲು, ಪೀನಟ್ ಬಟರ್ ಮತ್ತು ಜೆಲ್ಲಿ ಸ್ಯಾಂಡ್‌ವಿಚ್‌ಗಳು, ಹಮ್ಮಸ್ ಮತ್ತು ಪ್ರಿಟ್ಜೆಲ್‌ಗಳನ್ನು ನೀಡಲಾಗುತ್ತದೆ ಎಂದು ಅವರು ಸ್ಥಳೀಯ ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ನ್ಯೂಯಾರ್ಕ್‌ನ ಸರ್ಕಾರಿ ಶಾಲೆಗಳಲ್ಲಿ ಸುಮಾರು 9,38,000 ವಿದ್ಯಾರ್ಥಿಗಳು ಓದುತ್ತಿದ್ದಾರೆ. 2019ರಿಂದ ಕೆಲವು ಶಾಲೆಗಳಲ್ಲಿ ಮಾಂಸರಹಿತ ಸೋಮವಾರ (ಮೀಟ್‌ಲೆಸ್ ಮಂಡೆ) ನಿಯಮವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.