ಬಿಜೆಪಿ v/s ಇತರ ಪಕ್ಷಗಳು: ಮುಂದಿನ ಐದು ವರ್ಷಗಳಲ್ಲಿ 5 ಸಿಎಂ, 20 ಡಿಸಿಎಂ- ಭಾರಿ ಸ್ಕೆಚ್‌

party
Published on

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿಯನ್ನು ಏನಾದರೂ ಮಾಡಿ ಮಣಿಸಲೇಬೇಕು ಎಂದು ಇತರ ಪಕ್ಷಗಳು ಪಣತೊಟ್ಟಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವದಲ್ಲಿಯೇ ಭಾರಿ ಯೋಜನೆಯೊಂದು ಪ್ರತಿಪಕ್ಷಗಳು ರೂಪಿಸಿವೆ. ಈ ನಿಮಿತ್ತವಾಗಿ ಹೊಸ ಮೈತ್ರಿಕೂಟವನ್ನು ರಚಿಸಿಕೊಳ್ಳಲಾಗಿದ್ದು, 5 ವರ್ಷಗಳ ಅವಧಿಯಲ್ಲಿ ಐವರು ಮುಖ್ಯಮಂತ್ರಿ ಮತ್ತು 20 ಉಪ ಮುಖ್ಯಮಂತ್ರಿಗಳ ಸೂತ್ರವನ್ನು ಸಿದ್ಧಪಡಿಸಲಾಗಿದೆ.

ಈ ಕುರಿತು ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಮಾಹಿತಿ ನೀಡಿದ್ದಾರೆ. ಎಂಐಎಂ ಸೇರಿದಂತೆ ಒಟ್ಟು 10 ಪಕ್ಷಗಳು ಸೇರಿ ಮೈತ್ರಿಕೂಟ ರಚನೆ ಮಾಡಿಕೊಂಡಿದ್ದು, ಇದಕ್ಕೆ ಭಗಿದಾರಿ ಸಂಕಲ್ಪ ಮೋರ್ಚಾ ಎಂದು ಹೆಸರು ಇಡಲಾಗಿದೆ. ಇದರ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಸಮುದಾಯಗಳಿಂದ ಅಂದರೆ ಕುಶ್ವಾಹ, ರಾಜ್ಭರ್, ಚೌಹಾಣ್, ಮುಸ್ಲಿಂ ಮತ್ತು ಪಟೇಲ್ ಸಮುದಾಯಗಳಿಂದ ಐವರು ಮುಖ್ಯಮಂತ್ರಿ ಆಗಲಿದ್ದಾರೆ. ಇದಾದ ಬಳಿಕ ಪ್ರತಿ ವರ್ಷ ನಾಲ್ಕು ಉಪ ಮುಖ್ಯಮಂತ್ರಿಗಳ ಸೂತ್ರ ಕೂಡ ಇದೆ ಎಂದಿದ್ದಾರೆ.

ಭಗಿದಾರಿ ಸಂಕಲ್ಪ ಮೋರ್ಚಾ ಸಣ್ಣ ಪಕ್ಷಗಳ ವೇದಿಕೆಯಾಗಿದ್ದು, ಇದರಲ್ಲಿ ಓಂ ಪ್ರಕಾಶ್ ರಾಜ್‌ಭರ್ ಅವರ ಸುಭಾಸ್ಪಿ ಮತ್ತು ಅಸದುದ್ದೀನ್ ಒವೈಸಿ ಅವರ ಎಐಐಎಂ, ಕೃಷ್ಣ ಪಟೇಲ್ ನೇತೃತ್ವದ ಅಪ್ನಾ ದಳ ಮತ್ತು ಮಾಜಿ ಸಚಿವ ಬಾಬು ಸಿಂಗ್ ಕುಶ್ವಾಹ ನೇತೃತ್ವದ ಜನ ಅಧಿಕಾರ ಮಂಚ್ ಸೇರಿವೆ. ಓಂಪ್ರಕಾಶ್ ರಾಜ್‌ಭರ್ ಭಗಿದಿ ಸಂಕಲ್ಪ ಮೋರ್ಚಾ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಒಟ್ಟಾಗಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net