

ನವದೆಹಲಿ: ಅಡುಗೆ ಅನಿಲದ ಬೆಲೆ ಏರುಗತಿಯಲ್ಲಿಯೇ ಸಾಗಿ ಜನರಿಗೆ ಶಾಕ್ ಮೇಲೆ ಶಾಕ್ ಆಗುತ್ತಿರುವ ನಡುವೆಯೇ ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಅದೇನೆಂದರೆ, ಹೊಸದಾಗಿ ಎಲ್ಪಿಜಿ ಗ್ಯಾಸ್ ಸಂಪರ್ಕ ತೆಗೆದುಕೊಳ್ಳಬೇಕಿದ್ದರೆ ಇನ್ನುಮುಂದೆ ಹೆಚ್ಚಿನ ಹಣ ಸಂದಾಯ ಮಾಡಬೇಕಿದೆ!
ಪೆಟ್ರೋಲಿಯಂ ಕಂಪನಿಗಳು ಸಿಲಿಂಡರ್‌ಗಳ ಭದ್ರತಾ ಠೇವಣಿಯನ್ನು ಹೆಚ್ಚಿಸಿರುವುದರಿಂದ ಇಂದಿನಿಂದಲೇ (ಜೂನ್ 16) ಅನ್ವಯ ಆಗುವಂತೆ ಹೊಸ ಸಿಲಿಂಡರ್ ಭದ್ರತಾ ಠೇವಣಿ ಮೊತ್ತ ಹೆಚ್ಚಳವಾಗಿದೆ.
ಹೊಸ ಗ್ಯಾಸ್ ಕನೆಕ್ಷನ್ಗೆ ಭದ್ರತಾ ಠೇವಣಿಯಾಗಿ ಇಲ್ಲಿವರೆಗೆ 1450ರೂ. ಇತ್ತು. ಆದರೆ ಇದೀಗ ಅದು 2,200 ರೂಪಾಯಿಗೆ ಏರಿಕೆಯಾಗಿದೆ. ಅರ್ಥಾತ್ ಪಾವತಿಸಬೇಕಿದೆ. ಹೀಗಾಗಿ ಗ್ರಾಹಕರು ಈಗ 750ರೂ. ಹೆಚ್ಚುವರಿ ಹಣ ಪಾವತಿಸಬೇಕಿದೆ.
ಇನ್ನು ಗ್ಯಾಸ್ ಕನೆಕ್ಷನ್ ಪಡೆಯುವ ಸಂದರ್ಭದಲ್ಲಿ ತಲಾ 14.2 ಕೆಜಿಯ ಎರಡು ಸಿಲಿಂಡರ್ ತೆಗೆದುಕೊಳ್ಳುವ ಗ್ರಾಹಕರು ಕನೆಕ್ಷನ್ ಶುಲ್ಕದ ಜೊತೆಗೆ 1,500ರೂ. ಹೆಚ್ಚುವರಿ ಹಣ ಪಾವತಿಸಬೇಕಿದೆ. ಹೊಸ ಗ್ಯಾಸ್ ಕನೆಕ್ಷನ್ ಪಡೆಯುವಾಗ ಎರಡು ಸಿಲಿಂಡರ್ ತೆಗೆದುಕೊಳ್ಳುವ ಗ್ರಾಹಕರು ಒಟ್ಟು 4,400ರೂ. ಭದ್ರತಾ ಠೇವಣಿ ಪಾವತಿಸಬೇಕಾಗಿದೆ.
ಇಷ್ಟೇ ಅಲ್ಲದೇ ಗ್ಯಾಸ್ ರೆಗ್ಯುಲೇಟರ್ ಬೆಲೆಯೂ ಹೆಚ್ಚಾಗಿದೆ. ಹೊಸ ರೆಗ್ಯುಲೇಟರ್ ಬೆಲೆ 150 ರೂಪಾಯಿಗಳಿಂದ 250 ರೂಪಾಯಿಗಳಿಗೆ ಏರಿಕೆಯಾಗಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನೀಡಿರುವ ಮಾಹಿತಿಯ ಅನ್ವಯ, 5 ಕೆಜಿ ಸಿಲಿಂಡರ್‌ನ ಭದ್ರತೆಯನ್ನು ಈಗ 800ರ ಬದಲು 1150 ಕ್ಕೆ ಏರಿಸಲಾಗಿದೆ. ಪಾಸ್‌ಬುಕ್‌ಗೆ ರೂ. 25 ಹಾಗೂ ಅನಿಲ ಸಂಪರ್ಕದ ಪೈಪ್‌ಗೆ 150 ರೂ. ಪಾವತಿಸಬೇಕಾಗುತ್ತದೆ. ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆಯುವವರಿಗೆ ಈ ಬೆಲೆ ಪರಿಷ್ಕರಣೆ ಅನ್ವಯಿಸೋದಿಲ್ಲ ಎಂದು ತೈಲ ಕಂಪನಿಗಳು ತಿಳಿಸಿವೆ
ಕರ್ನಾಟಕದಲ್ಲಿ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 1,002 ರೂ.ಇದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಬಡ ವರ್ಗದ ಜನರಿಗೆ ಎಲ್ಪಿಜಿ ಸಬ್ಸಿಡಿಯನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಎಲ್ಪಿಜಿ ಸಿಲಿಂಡರ್ (12 ಸಿಲಿಂಡರ್ ತನಕ) ಮೇಲೆ 200ರೂ. ಸಬ್ಸಿಡಿ ಘೋಷಿಸಲಾಗಿದೆ.