

ನವದೆಹಲಿ: ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಡಿಜಿಟಲ್ ಪಾವತಿಯ ಸುರಕ್ಷತೆಯ ದೃಷ್ಟಿಯಿಂದ ನಾಳೆಯಿಂದ ಅಂದರೆ ಅಕ್ಟೋಬರ್ 1ರಿಂದ ಕೆಲವೊಂದು ಹೊಸ ನಿಯಮಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜಾರಿ ಮಾಡಿದೆ.
ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಇದು ಒಂದನೇ ತಾರೀಖಿನಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಹೇಳಿದೆ. ಈ ಕಾರ್ಡ್ಗಳಿಗೆ ಅನಗತ್ಯವಾಗಿ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ನೀಡದಂತೆ ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. ಇವುಗಳನ್ನು ಬಳಸಿಕೊಂಡು ಹೆಚ್ಚುತ್ತಿರುವ ವಂಚನೆ ವಹಿವಾಟುಗಳನ್ನು ನಿಲ್ಲಿಸುವ ಉದ್ದೇಶವನ್ನು ಈ ಸೂಚನೆ ನೀಡಲಾಗಿತ್ತು.
ಹೊಸ ಮಾರ್ಗಸೂಚಿ ಏನೇನು ಹೇಳುತ್ತದೆ?
* ದೇಶದಲ್ಲಿ ಅಥವಾ ವಿದೇಶಗಳಲ್ಲಿ ಇದುವರೆಗೆ ಆನ್ಲೈನ್ ವ್ಯವಹಾರ ನಡೆಸಿದ ಎಲ್ಲಾ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಆನ್ಲೈನ್ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.
* ಅಂತಾರಾಷ್ಟ್ರೀಯ ವಹಿವಾಟು, ಆನ್ಲೈನ್ ವಹಿವಾಟು ಬೇಕು ಎಂದು ಗ್ರಾಹಕರು ಹೇಳಿದರೆ ಮಾತ್ರ ಬ್ಯಾಂಕ್ ಅಂಥ ಸೇವೆಗಳನ್ನು ಗ್ರಾಹಕರಿಗೆ ನೀಡಬೇಕು. ಎಷ್ಟೋ ಗ್ರಾಹಕರಿಗೆ ಈ ಸೇವೆಯ ಅಗತ್ಯವೇ ಇರುವುದಿಲ್ಲ. ಆದಾಗ್ಯೂ ಅವರ ಡೆಬಿಟ್, ಕ್ರೆಡಿಟ್ ಕಾರ್ಡ್ನಲ್ಲಿ ಸೇವೆ ಒದಗಿಸುವುದರಿಂದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಂಶವನ್ನು ಜಾರಿಗೆ ತರಲಾಗಿದೆ.
* ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗೆ ಇಂತಿಷ್ಟೇ ಮೊತ್ತವನ್ನು ನಿಗದಿಪಡಿಸುವ ಅಧಿಕಾರವು ಇನ್ನು ಮುಂದೆ ಗ್ರಾಹಕರಿಗೆ ಇರಲಿದೆ. ಇದು ಆನ್ಲೈನ್ ವ್ಯವಹಾರಕ್ಕೆ ಸೀಮಿತವಾಗಿದೆ. ಉದಾಹರಣೆಗೆ ಯಾವುದೇ ಗ್ರಾಹಕರು ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಯಾವುದೇ ಸಂದರ್ಭದಲ್ಲಿ ಒಂದು ಬಾರಿಯ ಆನ್ಲೈನ್ ವ್ಯವಹಾರಕ್ಕೆ ಬಳಸುವುದಿಲ್ಲ ಎಂದಾದರೆ ಆ ಮೊತ್ತವನ್ನು ನಿಗದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಟಿಎಂ, ಪಿಒಎಸ್, ಇ-ಕಾಮರ್ಸ್ ಅಥವಾ ಎನ್‌ಎಫ್‌ಸಿಯಲ್ಲಿ ಯಾವುದೇ ರೀತಿಯ ಆನ್ಲೈನ್ ಸೇವೆಯಲ್ಲಿಯೂ ನಿಗದಿತ ಮೊತ್ತವನ್ನು ಸ್ಪಷ್ಟಪಡಿಸಲು ಅವಕಾಶ ಕಲ್ಪಿಸಲಾಗಿದೆ.
* ಅಂತಾರಾಷ್ಟ್ರೀಯ ವಹಿವಾಟಿಗೆ ಸದ್ಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಅವಕಾಶವಿದೆ. ಒಂದು ವೇಳೆ ಯಾವುದೇ ಕಾರಣಕ್ಕೂ ಇದು ನಿಮಗೆ ಅಗತ್ಯವೇ ಇಲ್ಲ ಎಂದಾದರೆ ಅದನ್ನು ಸ್ಟಾಪ್ ಮಾಡಿಸಲು ಇನ್ನುಮುಂದೆ ಅವಕಾಶ ಸಿಗಲಿದೆ. ಒಂದು ವೇಳೆ ಈ ಸೇವೆಯನ್ನು ಪುನರಾರಂಭಿಸಲು ಬಯಸುವುದಾದರೂ ಅದಕ್ಕೆ ಅವಕಾಶವಿದೆ.
ನಿಮ್ಮ ವ್ಯವಹಾರದ ಮೊತ್ತವನ್ನು ಮಿತಿಗೊಳಿಸಲು ನೀವೇನು ಮಾಡಬೇಕು? ಇಲ್ಲಿದೆ ವಿವರ:
- ಮೊದಲನೆಯದಾಗಿ, ನೀವು ಮೊಬೈಲ್ ಅಥವಾ ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಬೇಕು.
- ಕಾರ್ಡ್‌ಗಳ ವಿಭಾಗದಲ್ಲಿ ಹೋಗಿ 'ಕಾರ್ಡ್‌ಗಳನ್ನು ನಿರ್ವಹಿಸು' ('manage cards')ವಿಭಾಗವನ್ನು ಆಯ್ಕೆಮಾಡಿ
- ಇಲ್ಲಿ ನಿಮಗೆ ಎರಡು ಆಯ್ಕೆಗಳು ಇರುತ್ತವೆ : ದೇಶೀಯ ಮತ್ತು ಅಂತಾರಾಷ್ಟ್ರೀಯ 9domestic and international)
- ನಿಮಗ್ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.
- ನೀವು ಯಾವುದೇ ನಿರ್ದಿಷ್ಟ ವಹಿವಾಟನ್ನು ಕ್ಲೋಸ್ ಮಾಡಲು ಬಯಸಿದರೆ ಅದನ್ನು ಆಫ್ ಮಾಡಿ, ನೀವು ಪ್ರಾರಂಭಿಸಲು ಬಯಸಿದರೆ ಅದನ್ನು ಆನ್ ಮಾಡಿ.
- ನೀವು ವ್ಯವಹಾರದ ಮಿತಿಯನ್ನು ಎಷ್ಟಕ್ಕೆ ಮಿತಿಗೊಳಿಸಲು ಬಯಸುತ್ತೀರೋ ಅಷ್ಟನ್ನು ಅಲ್ಲಿ ಉಲ್ಲೇಖಿಸಿ.